ಶೀಘ್ರವೇ ಬಿಎಸ್ವೈ ಬಿಜೆಪಿಗೆ: ಶೆಟ್ಟರ್ ವಿಶ್ವಾಸ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 14
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆತರುವ ಅಥವಾ ಕೆಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಕೇಂದ್ರದ ವರಿಷ್ಠರಿಗೆ ರಾಜ್ಯ ನಾಯಕರ ನಿರ್ಧಾರ ತಿಳಿಸಲಾಗಿದೆ. ಶೀಘ್ರವೇ ಕೇಂದ್ರ ನಾಯಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಬಳ್ಳಾರಿಯ ಕೊಟ್ಟೂರುಸ್ವಾಮಿ ಮಠದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ (ಆರ್ಎಸ್ಎಸ್)ನ ಕರ್ನಾಟಕ ಪ್ರಾಂತಗಳ ವಾರ್ಷಿಕ ಸಮನ್ವಯ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದನ್ನು ಯಡಿಯೂರಪ್ಪ ಸ್ವಾಗತಿಸಿ, ಹೊಂದಾಣಿಕೆ ಮಾತನ್ನಾಡಿರುವುದು ಉತ್ತಮ ಬೆಳವಣಿಗೆ. ರಾಜ್ಯದ ಬಿಜೆಪಿ ಮತಗಳು ಹರಿದು ಹಂಚಿ ಹೋಗುವುದನ್ನು ತಡೆಯಲು ಯಡಿಯೂರಪ್ಪರನ್ನು ಪಕ್ಷಕ್ಕೆ ಕರೆತರುವ ವಿಷಯದಲ್ಲಿ ಕೇಂದ್ರದ ನಾಯಕರು ಶೀಘ್ರದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.
ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ನರೇಂದ್ರ ಮೋದಿ ಅವರನ್ನು ಪಕ್ಷ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದು ದೇಶದ ಜನತೆ ಪಕ್ಷಾತೀತವಾಗಿ ಸ್ವಾಗತಿಸುತ್ತಿದೆ. ಮೋದಿ ಅವರ ಆಯ್ಕೆಯಿಂದ ರಾಜ್ಯದಲ್ಲಿ ಕಳೆದ ಬಾರಿಯ 19 ಸ್ಥಾನಗಳಿಗಿಂತ ಹೆಚ್ಚಿನ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವ ವಿಶ್ವಾಸವಿದೆ ಎಂದರು.
ಆಡಳಿತ ಯಂತ್ರ ಕುಸಿತ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಕುಸಿದಿದೆ. ಮಂತ್ರಿಗಳು ತಮ್ಮ ಕ್ಷೇತ್ರಗಳಿಗೆ ಮಾತ್ರ ಸೀಮಿತರಾಗುವ ಮೂಲಕ ಆಡಳಿತ ಯಂತ್ರ ಕುಸಿದಂತಾಗಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಿಎಂ ಸಿದ್ದರಾಮಯ್ಯ ಪಾದಯಾತ್ರೆ ಮಾಡಿ ಏನೆಲ್ಲಾ ಮಾತನಾಡಿದರು, ಆದರೆ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಯ ತನಿಖೆ ಅನುಷ್ಠಾನಕ್ಕೆ ಮುಂದಾಗುತ್ತಿಲ್ಲ. ಇದೀಗ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರ ಸಿ ಕೆಟಗರಿಯ 51 ಗಣಿ ಕಂಪನಿಗಳ ಗುತ್ತಿಗೆ ರದ್ದುಪಡಿಸಿದವರಲ್ಲಿ, ಬಹುತೇಕ ಗಣಿ ಕಂಪನಿಗಳು ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರಿಗೆ ಸೇರಿದ್ದಾಗಿವೆ. ಅಕ್ರಮ ಗಣಿಗಾರಿಕೆ ವಿಷಯವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಆಗ್ರಹಿಸಿದರು.
ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧ
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಾತನಾಡಿ, ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಸಿದ್ಧತೆ ನಡೆದಿದ್ದು, ಸೆ. 25ರ ನಂತರ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ನಾಯಕರಿಂದ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ವಾರದಿಂದಲೇ ರಾಜ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಆಯಾ ಕ್ಷೇತ್ರಗಳ ಉಸ್ತುವಾರಿಗಳ ನೇಮಕ ಮಾಡಿ ಚುನಾವಣಾ ಸಿದ್ಧೆತೆಯನ್ನು ಚುರುಕುಗೊಳಿಸಲಾಗುತ್ತದೆ ಎಂದರು.
ಗುಜರಾತ್, ಮಹಾರಾಷ್ಟ್ರ ಬಿಟ್ಟರೆ ಮೋದಿಯವರು ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯ. ಇದರಿಂದ ರಾಜ್ಯದಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಅಧಿಕ ಸ್ಥಾನಗಳಲ್ಲಿ ಜಯ ಖಚಿತ ಎಂದ ಅವರು, ಆಡ್ವಾಣಿ ಅವರ ಮುನಿಸಿನ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲಾ ಗೊಂದಲಗಳು ಸರಿ ಹೋಗಿವೆ. ಮೋದಿಯವರು ಹೋಗಿ ಆಡ್ವಾಣಿ ಅವರ ಆಶೀರ್ವಾದ ಪಡೆದಿದ್ದು, ಮೋದಿಯವರಿಗೆ ಆಡ್ವಾಣಿ ಅವರ ಮಾರ್ಗದರ್ಶನವಿದೆ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರು ಮೋದಿಯವರ ಆಯ್ಕೆಯನ್ನು ಸ್ವಾಗತಿಸಿರುವುದು ಉತ್ತಮ ಬೆಳವಣಿಗೆ, ಅವರು ಎನ್ಡಿಎಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕೇಂದ್ರ ನಾಯಕರು ಸೂಕ್ತ ನಿರ್ಣಯ ತೆಗದುಕೊಳ್ಳವ ಭರವಸೆ ಇದೆ ಎಂದರು.
ಈ ಸಂದರ್ಭ ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ಇತರರು ಇದ್ದರು.