ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಪಾದ ಮಳೆ ಸೊಂಪಾದ ಬೆಳೆ

Vishwanath S
Updated On : 15 Sept 2013, 12:14 pm

ಹೂವಿನಹಡಗಲಿ: ಸಂಪೂರ್ಣ ಬತ್ತಿ ಹೋಗುವ ಹಂತದಲ್ಲಿದ್ದ ಬೆಳೆಗಳಿಗೆ 2-3 ದಿನಗಳಿಂದ ಸುರಿದ ಉತ್ತಮ ಮಳೆಯಿಂದಾಗಿ ಬೆಳೆ ಜೀವ ಹಿಡಿದುಕೊಂಡು ನಲಿಯುತ್ತದ್ದರೆ ಅತ್ತ ರೈತರ ಮೊಗದಲ್ಲೂ ಸಂತಸ ಮನೆ ಮಾಡಿದೆ.
ತಾಲೂಕಿನಲ್ಲಿ ಮೇ, ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಆದರೆ ಜುಲೈನಲ್ಲಿ 63.43 ಮಿ.ಮೀ. ಮತ್ತು ಆಗಸ್ಟ್‌ನಲ್ಲಿ 82.05 ಮಿ.ಮೀ. ಮಳೆಯಾಗಿತ್ತು. ಈವರೆಗೂ ಒಟ್ಟು 54.4 ಮಿ.ಮೀ. ಸರಾಸರಿ ಮಳೆ ಬಿದ್ದಿದೆ ಎನ್ನುತ್ತಾರೆ ಅಧಿಕಾರಿಗಳು.
ಉತ್ತಮ ಮಳೆಯಾಗಿದ್ದರಿಂದ ಕಾಳು ಕಟ್ಟುವ ಹಂತದಲ್ಲಿದ್ದ ಬೆಳೆಗಳಿಗೆ ಇಂಬು ನೀಡಿದಂತಾಗಿದೆ. ತಾಲೂಕಿನ ಕೆಲವೆಡೆಗಳಲ್ಲಿ ಮಳೆಯಿಂದಾಗಿ ಮೆಕ್ಕೆಜೋಳ, ಬತ್ತ ಹಾಗೂ ಹೈಬ್ರೀಡ್ ಜೋಳ ಸೇರಿದಂತೆ ಇತರೆ ಬೆಳೆಗಳಲ್ಲಿ ಮಳೆ ನೀರು ನಿಂತುಕೊಂಡಿದ್ದು ಬೆಳೆಗಳಿಗೆ ಹಾನಿ ಸಂಭವಿಸಿದೆ.
ಪರಿಹಾರ ನೀಡಲಿ: ತಾಲೂಕಿನ ಬ್ಯಾಲಹುಣ್ಸಿ, ಮಕರಬ್ಬಿ, ನಂದಿಗಾವಿ ಸೇರಿದಂತೆ ಇತರೆ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ದಾರಿ ಇಲ್ಲದೆ ಜಮೀನುಗಳಲ್ಲಿ ನೀರು ನಿಂತ ಪರಿಣಾಮ ಬೆಳೆ ನಷ್ಟವಾಗಿದೆ. ತಹಸೀಲ್ದಾರ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಗಿರುವ ನಷ್ಟವನ್ನು ಅಂದಾಜಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ. ಮೆಕ್ಕೆಜೋಳ, ಹತ್ತಿ, ಶೇಂಗಾ, ಹೈಬ್ರೀಡ್ ಜೋಳ ಕಾಳು ಕಟ್ಟುವ ಹಂತಕ್ಕೆ ಬಂದಿದ್ದು, ದೊಡ್ಡ ಪ್ರಮಾಣದ ಮಳೆ ಇಲ್ಲದೆ ಬೆಳೆಗಳು ಬಾಡುತ್ತಿದ್ದವು. ಈಗ ಉತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರೈತರು. ತಾಲೂಕು 94,855 ಹೆಕ್ಟೇರ್ ಭೌಗೋಳಿಕ ಪ್ರದೇಶ ಹೊಂದಿದ್ದು, ಇದರಲ್ಲಿ 73,993 ಹೆಕ್ಟೇರ್ ಪ್ರದೇಶ ಸಾಗುವಳಿ ಪ್ರದೇಶವಿದೆ. ಇದರಲ್ಲಿ 33,895 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಅತಿಹೆಚ್ಚು ಬಿತ್ತನೆ ಮಾಡಲಾಗಿದೆ. ಉಳಿದಂತೆ ಹೈಬ್ರೀಡ್ ಜೋಳ 8,192 ಹೆಕ್ಟೇರ್, ಸಜ್ಜೆ 3,897 ಹೆಕ್ಟೇರ್, ತೊಗರಿ 4,473 ಹೆಕ್ಟೇರ್, ಶೇಂಗಾ 3,066 ಹೆಕ್ಟೇರ್, ಸೂರ್ಯಕಾಂತಿ 3,709 ಹೆಕ್ಟೇರ್, ಬತ್ತ 2,158 ಹೆಕ್ಟೇರ್, ಹತ್ತಿ 1,853 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. ಎಲ್ಲ ಭಾಗಗಳಲ್ಲಿ ಸಕಾಲಕ್ಕೆ ಮಳೆ ಬಂದಿದ್ದರಿಂದ ಬಹುತೇಕ ಬೆಳೆಗಳು ರೋಗಮುಕ್ತವಾಗಿವೆ. ಇದಕ್ಕೂ ಮುನ್ನ ಮೆಕ್ಕಜೋಳಕ್ಕೆ ಬೆಂಕಿ ರೋಗ ಕಾಣಿಸಿಕೊಂಡಿತ್ತು. ಮಳೆ ಬಂದ ಕಾರಣ ರೋಗ ಇಲ್ಲದಂತಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಉತ್ತಮ ಮಳೆ: ರೈತರು ಸಂತಸ
ಕೂಡ್ಲಿಗಿ: ತಾಲೂಕಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದ ರೈತರಲ್ಲಿ ಸಂತ ಸ ಮೂಡಿಸಿದೆ. ಬಿತ್ತನೆಯಾದ ನಂತರ ಒಂದೆರಡು ಬಾರಿ ವರುಣನ ಕೃಪೆ ಕಂಡಿದ್ದ ರೈತರು ಮತ್ತೆ ಮಳೆ ಕೊರತೆ ಎದುರಾಗಿದ್ದರಿಂದ ಆತಂಕ ಮನೆ ಮಾಡಿತ್ತು. ಆದರೆ ಗುರುವಾರ, ಶುಕ್ರವಾರ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಹರ್ಷ ಮೂಡಿದೆ.
ಕೂಡ್ಲಿಗಿ, ಕೊಟ್ಟೂರು, ಗುಡೇಕೋಟೆ ಹೋಬಳಿಯಾದ್ಯಂತ ಆಗಾಗ ಮಳೆ ಬಂದು ಮೆಕ್ಕೆಜೋಳ, ಶೇಂಗಾ ಫಸಲುಗಳಿಗೆ ಆಸರೆಯಾಗಿತ್ತು. ಹೊಸಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ತಿಂಗಳಿಂದ ಮಳೆ ಕೊರತೆ ಇತ್ತು. ಮಳೆ ಇಲ್ಲದೆ ಶೇಂಗಾ ಇತರ ಬೆಳೆಗಳೆಲ್ಲ ಬಾಡುತ್ತಿದ್ದವು. ಆದರೆ, ಎರಡು ದಿನಗಳಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ರೈತರಿಗೆ ಅನುಕೂಲವಾದಂತಾಗಿದೆ. ತಾಲೂಕಿನಲ್ಲಿ ಮಳೆಯಿಂದ ಹಾನಿ ಸಂಭವಿಸಿಲ್ಲ ಎಂದು ತಾಲೂಕಾಡಳಿತ ತಿಳಿಸಿದೆ. ಕೊಟ್ಟೂರಿನಲ್ಲಿ 5 ಮಿ.ಮೀ., ಕೂಡ್ಲಿಗಿ 7.2 ಮಿ.ಮೀ., ಹೊಸಹಳ್ಳಿ 19.6 ಮಿ.ಮೀ., ಬಣವಿಕಲ್ಲು 13.8 ಮಿ.ಮೀ., ಗುಡೇಕೋಟೆ 26 ಮಿ.ಮೀ., ಚಿಕ್ಕಜೋಗಿಹಳ್ಳಿ 87.2 ಮಿ.ಮೀ.ನಷ್ಟು ಮಳೆ ಆಗಿರುವ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement