ಎ ಪೆನಾಲ್ಗೆ ಭರ್ಜರಿ ಬಹುಮತ
ಬಳ್ಳಾರಿ: ಕುತೂಹಲ ಕೆರಳಿಸಿದ ಬಳ್ಳಾರಿ ವಕೀಲರ ಸಂಘದ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಮತ್ತು ಭಾನುವಾರ ನಡೆದಿದ್ದು, ಅಧ್ಯಕ್ಷರಾಗಿ ಪಾಟೀಲ್ ಸಿದ್ದಾರೆಡ್ಡಿ ಆಯ್ಕೆಯಾಗಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ವೈ. ರಂಗನಾಥ್ ಅವರನ್ನು ಹಿಂದಿಕ್ಕಿ ಗೆಲವು ಸಾಧಿಸಿದ್ದಾರೆ.
ಹಿರಿಯ ನ್ಯಾಯವಾದಿ ಉಡೇದ ಬಸವರಾಜ್ ನೇತೃತ್ವದ ಎ ಪೆನಾಲ್ ಬಹುಮತ ಸಾಧಿಸಿ, ಸಂಘದ ಅಧಿಕಾರದ ಚುಕ್ಕಾಣಿ ಹಿಡಿದಂತಾಗಿದೆ. ಬಿ ಪೆನಾಲ್ಗೆ ಚುನಾವಣೆಯಲ್ಲಿ ಹಿನ್ನಡೆಯಾಗಿದೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಎ ಪೆನಾಲ್ನ ಅನ್ಸರ್ ಬಾಷಾ ಮತ್ತು ಬಿ ಪೆನಾಲ್ನ ಬಿ.ಡಿ. ಚಿದಾನಂದ ಅವರು ಮಧ್ಯೆ ಪೈಪೋಟಿ ಇದ್ದು, ಎ ಪೆನಾಲ್ನ ಅನ್ಸಾರ್ ಬಾಷಾ ಅವರು 95 ಮತಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ಇನ್ನು ಕಾರ್ಯದರ್ಶಿ ಸ್ಥಾನಕ್ಕೆ ಎ ಪೆನಾಲ್ನ ಡಿ. ರಾಮಕೃಷ್ಣ ಹಾಗೂ ಬಿ ಪೆನಾಲ್ನ ರಾಮಬ್ರಹ್ಮಂ ಅವರ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಎ ಪೆನಾಲ್ನ ಡಿ. ರಾಮಕೃಷ್ಣ ಅವರು 29 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಎ ಪೆನಾಲ್ನ ಎಲ್.ಟಿ. ಶೇಖರ್ ಹಾಗೂ ಬಿ ಪೆನಾಲ್ನ ಕಾಳಿಂಗ ರಾಜ್ ನಡುವೆ ಸ್ಪರ್ಧೆ ಏರ್ಪಟ್ಟು ಎ. ಪೆನಾಲ್ ಎಲ್.ಟಿ. ಶೇಖರ್ 104 ಮತಗಳಿಂದ ಗೆಲವು ಸಾಧಿಸಿದ್ದಾರೆ. ಇನ್ನು ಜಂಟಿ ಕಾರ್ಯದರ್ಶಿಯಾಗಿ ಪ್ರಭಾವತಿ ಅವರು ಆಯ್ಕೆಯಾಗಿದ್ದಾರೆ.
9 ಸ್ಥಾನ: ಕಾರ್ಯಕಾರಿ ಸಮಿತಿಯ 9 ಸ್ಥಾನಗಳಲ್ಲಿ ಎ ಪೆನಾಲ್ ತಂಡವು 8 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರೆ, ಬಿ ಪೆನಾಲ್ ತಂಡ ಕೇವಲ 1 ಸ್ಥಾನದಲ್ಲಿ ಮಾತ್ರ ಜಯ ಸಾಧಿಸಿದೆ. ಎ ಪೆನಾಲ್ನ ಲಿಂಗರಾಜ್, ಎಚ್. ಎಂ. ಕೇದರನಾಥ, ಜಿ.ಎನ್. ಗಿರಿಯಪ್ಪ, ಬಿ.ಟಿ. ಸುಧಾಕರ, ಶಾಕೀರ್, ಅನಂತಪ್ರಸಾದ್, ಆರ್. ಮಲ್ಲಿಕಾರ್ಜುನ, ಟಿ. ನಿಂಗಪ್ಪ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ ಬಿ ಪೆನಾಲ್ನಿಂದ ಜಾವೇದ್ ಪಾಟೀಲ್ ಮಾತ್ರ ಆಯ್ಕೆಯಾಗಿದ್ದಾರೆ.
ಶನಿವಾರ ಕಾರ್ಯಕಾರಿ ಸಮಿತಿ ಸದಸ್ಯರ ಮತ ಎಣಿಕೆ ಮಾಡಿದ್ದರೆ, ಭಾನುವಾರ ಇನ್ನುಳಿದ ಪದಾಧಿಕಾರಿಗಳ ಮತ ಎಣಿಕೆ ಕಾರ್ಯ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳು ಹಾಗೂ 8 ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳು ಎ ಪೆನಾಲ್ ಪಾಲಾಗಿವೆ. ಇದರಿಂದಾಗಿ ಎ ಪೆನಾಲ್ನ ಹಿರಿಯ, ಕಿರಿಯ ನ್ಯಾಯವಾದಿಗಳು ನ್ಯಾಯಾಲಯದ ಆವರಣದಲ್ಲಿ ಸಂಭ್ರಮಾಚಾರಣೆ ಮಾಡಿದರು. ಕಳೆದ ಬಾರಿ ಬಿ ಪೆನಾಲ್ನವರು ಸಂಘದ ಅಧಿಕಾರವನ್ನು ಪಡೆದಿದ್ದರು.