ತರಬೇತಿ ಪಡೆದು ಸ್ವಾವಲಂಬಿ ಜೀವನ ನಡೆಸಿ: ತಾಪಂ ಸದಸ್ಯೆ ಹಂಪಮ್ಮ
ಹೊಸಪೇಟೆ: ಕೌಶಲ್ಯ ತರಬೇತಿ ಶಿಬಿರಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಕೊಂಡಾಗ ಸ್ವಾವಲಂಬಿ ಜೀವನ ಸಾಗಿಸಲು ಸಾಧ್ಯ ಎಂದು ತಾಪಂ ಸದಸ್ಯೆ ಹಂಪಮ್ಮ ಗಾಳೆಪ್ಪ ಹೇಳಿದರು.
ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಕೂಡ್ಲಿಗಿ ಸುರಭಿ ಸಮಗ್ರ ಮಾನವ ಕಲ್ಯಾಣಾಭಿವೃದ್ಧಿ ಸಂಸ್ಥೆ ಭಾನುವಾರ ಹಮ್ಮಿಕೊಂಡಿದ್ದ 7 ದಿನಗಳ ಮೇಣದ ಹಾಗೂ ಅಗರ ಬತ್ತಿ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸ್ಲಯಂ ಉದ್ಯೋಗದಲ್ಲಿ ತೊಡಗಿಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು. ಸಂಘ- ಸಂಸ್ಥೆಗಳು ಹಮ್ಮಿಕೊಳ್ಳುವ ಸ್ವಯಂ ಉದ್ಯೋಗ ತರಬೇತಿಗಳಲ್ಲಿ ಭಾಗವಹಿಸಿ ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು ಎಂದರು.
ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನಗೌಡ ಮಾತನಾಡಿ, ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ಸರ್ಕಾರದ ಯೋಜನೆಗಳ ಜತೆಗೆ ಸಂಘ- ಸಂಸ್ಥೆಗಳು ನೀಡುವ ತರಬೇತಿ ಶಿಬಿರದಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಿ ಉತ್ತಮ ತರಬೇತಿ ಪಡೆದು ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗಬೇಕು ಎಂದು ಹೇಳಿದರು.
ಸುರಭಿ ಸಮಗ್ರ ಮಾನವ ಕಲ್ಯಾಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಜಿ. ಉಮೇಶ್ ಮಾತನಾಡಿ, ಮಹಿಳೆಯರಿಗೆ ನೀಡುವ ತರಬೇತಿ ಶಿಬಿರದಲ್ಲಿ ಹಾಗೂ ಮಹಿಳೆಯರು ಮನೆಯಲ್ಲಿ ಸಿದ್ಧಪಡಿಸುವ ಉತ್ಪನ್ನಗಳನ್ನು ಸಂಸ್ಥೆ ಖರೀದಿಸಲಿದೆ. ಇದರಿಂದ ಮಾರ್ಕೆಟಿಂಗ್ ಸಮಸ್ಯೆ ಉದಭವಿಸದು. ಮಹಿಳೆಯರು ಇದರ ಲಾಭ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು. ಸ್ವಸಹಾಯ ಸಂಘದ ಸದಸ್ಯೆ ವಹೀದಾ ಬೇಗಂ, ಕವಿತಾ, ಸಂಪನ್ಮೂಲ ವ್ಯಕ್ತಿಗಳಾದ ಕಾಸಲ ಮಂಜುನಾಥ, ಗೀತಾ, ಮಾದವಿ, ಶಿವಲೀಲಾ ಸೇರಿದಂತೆ ಇತರರು ಇದ್ದರು. ಎಂ. ವೀರಣ್ಣ ಸ್ವಾಗತಿಸಿ, ವಂದಿಸಿದರು. ರವಿಶಂಕರ್ ನಿರೂಪಿಸಿದರು.
--