ದೇಶದೊಳಿತಿಗೆ ಬೌದ್ಧಿಕ ಶಕ್ತಿ ಬಳಸಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 15
ಯುವಕರು, ಪೋಷಕರು ವಿದೇಶಿ ವ್ಯಾಮೋಹ ಬಿಡಿ. ನಮ್ಮ ಬೌದ್ಧಿಕ ಶಕ್ತಿಯನ್ನು ಇನ್ನೊಂದು ದೇಶದವರು ಖರೀದಿ ಮಾಡಿ, ಆ ದೇಶ ಶ್ರೀಮಂತವಾಗಿ ನಮಗೆ ಜನ್ಮ ನೀಡಿದ ಭೂಮಿ ಸೊರಗುವುದು ಬೇಡ ಎಂದು ಉಜ್ಜಿನಿ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಲಹೆ ನೀಡಿದರು.
ನಗರದ ಅಲ್ಲೀಪುರ ಮಠದಲ್ಲಿ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸಿದ್ದೇಶ್ವರ ಶಿಕ್ಷಕರ ಸಂಘ ಜಂಟಿಯಾಗಿ ಏರ್ಪಡಿಸಿದ್ದ ವೀರಶೈವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಿದ್ದೇಶ್ವರ ಶಿಕ್ಷಕರ ಸಂಘದ ರಜತಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಇಂದು ಪೋಷಕರಿಗೆ ತಮ್ಮ ಮಕ್ಕಳು ವಿದೇಶಕ್ಕೆ ಹೋಗಬೇಕು, ದುಡಿಯಬೇಕು ಅದು ಪ್ರತಿಷ್ಠೆಯ ಪ್ರಶ್ನೆಯೆಂದು ತಿಳಿಯುತ್ತಾರೆ, ಇದು ತಪ್ಪು ಕಲ್ಪನೆ. ವಿದೇಶಕ್ಕೆ ಹೋಗಿ ಹಣ ಗಳಿಸಬೇಕೆಂಬ ವ್ಯಾಮೋಹ ಬೇಡ, ಜನ್ಮ ನೀಡಿದ ಭೂಮಿ ತಾಯಿಯ ಋಣ ತೀರಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ವಿದೇಶಕ್ಕೆ ಹೋಗಿರುವವರ ಬೌದ್ದಿಕ ಶಕ್ತಿ ನಮ್ಮ ದೇಶದಲ್ಲಿದ್ದರೆ, ಇಡೀ ವಿಶ್ವದಲ್ಲಿಯೇ ಭಾರತ ಅತ್ಯಂತ ಬುದ್ಧಿವಂತ ಹಾಗೂ ಅಭಿವೃದ್ಧಿ ದೇಶ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು.
ಪ್ರತಿಭೆ ಗುರುತಿಸಿ: ಎಮ್ಮಿಗನೂರು ಮಠದ ವಾಮದೇವ ಮಹಾಂತ ಶಿವಾಚಾರ್ಯರು ಮಾತನಾಡಿ, ಗಾತ್ರ, ಗೋತ್ರ, ಸೂತ್ರದಿಂದ ಒಬ್ಬ ವ್ಯಕ್ತಿಯನ್ನು ಅಳೆಯಲು ಬರುವುದಿಲ್ಲ. ಸಮಾಜದಲ್ಲಿ ಅವರ ಸ್ಥಾನಮಾನ ಏನೆಂಬುದರ ಮೇಲೆ ಸಮಾಜದಲ್ಲಿ ಗೌರವ ಸ್ಥಾನ ಗೊತ್ತಾಗುತ್ತದೆ. ದೇಶ, ಭಾಷೆ, ಸಂಸ್ಕೃತಿ ಉಳಿವಿಕೆಗೆ ಕೇವಲ ಪರಂಪರೆ ರಕ್ಷಿಸಿದರೆ ಸಾಲದು, ಪ್ರತಿಭೆಯನ್ನು ಗುರುತಿಸುವ ಹಾಗೂ ಪ್ರೋತ್ಸಾಹಿಸುವ ಕೆಲಸವಾಗಬೇಕು. ಪ್ರತಿಭೆಯನ್ನು ಜಾತಿ ಎಂಬ ಅಳತೆಗೋಲಿನಿಂದ ಅಳೆಯಬಾರದು ಎಂದು ತಿಳಿಸಿದರು.
ಸಮಾಜಮುಖಿ ಚಿಂತನೆ ಇರಲಿ: ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಮಾತನಾಡಿ, ಬಹುತೇಕರು ಸ್ವಾರ್ಥ ಜೀವನದಲ್ಲಿ ಮುಳುಗಿ ಹೋಗಿ, ಸಮಾಜಮುಖಿ ಚಿಂತನೆ ಕಡಿಮೆಯಾಗುತ್ತಿದೆ. ದೇಶಭಕ್ತಿ, ದೇಶದ ಬಗ್ಗೆ ಕಳಕಳಿ ಕಡಿಮೆಯಾಗುತ್ತಿದೆ. ಪ್ರತಿಭಾವಂತರು ತಮ್ಮ ಪ್ರತಿಭೆಯನ್ನು ಕೇವಲ ವೈಯಕ್ತಿಕ ಬದುಕಿಗೆ ಸೀಮಿತಗೊಳಿಸಿಕೊಳ್ಳದೆ, ಸಮಾಜಮುಖಿಯಾಗಬೇಕು, ಅಂದಾಗ ಮಾತ್ರ ಪ್ರತಿಭೆಗೆ ಗೌರವ, ಸ್ಥಾನಮಾನ, ಬೆಲೆ ಸಿಗಲು ಸಾಧ್ಯ. ಪ್ರತಿಭೆಯೆನ್ನುವುದು ಸ್ವಾರ್ಥದ ಸ್ವತ್ತಾಗದೆ, ಸಮಾಜದ ಸ್ವತ್ತು ಎನ್ನುವಂತೆ ತಿಳಿದಾಗ ಸಮಾಜದ ಉನ್ನತಿ, ಏಳಿಗೆ ಸಾಧ್ಯ ಎಂದರು.
ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಉಜ್ಜನಿ ಸ್ವಾಮೀಜಿ ಅಭಿನಂಧಿಸಿದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಕಾರ್ಯದರ್ಶಿ ಗುರುಸಿದ್ದಸ್ವಾಮಿ, ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಹರಗಿನಡೋಣಿ ಸ್ವಾಮೀಜಿ, ಪಿಡಬ್ಲ್ಯೂಡಿ ಅಧೀಕ್ಷಕ ಅಭಿಯಂತ ಶಿವಯೋಗಿ ಹಿರೇಮಠ, ಎಸ್. ಚನ್ನನಗೌಡ, ಸಿಎಚ್ಎಂ ಬಸವರಾಜ್, ಎಸ್.ಎ. ಹುದ್ಧಾರ, ಟಿ.ಎಂ. ವೀರಪ್ಪ, ಜಗದೀಶ್ ಸೇರಿದಂತೆ ವೀರಶೈವ ಸಮಾಜದ ಮುಖಂಡರು ಇದ್ದರು. ಪ್ರೀತಿ ಅವರ ಭರತನಾಟ್ಯ ಎಲ್ಲರ ಗಮನ ಸೆಳೆಯಿತು. ಆರ್ಎಚ್ಎಂ ಚನ್ನಬಸಯ್ಯ ಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರು. ವಿರೂಪಾಕ್ಷಯ್ಯ ನಿರೂಪಿಸಿದರು.