ಮುದೇನೂರು ಕೆರೆ ರು. 5 ಸಾವಿರಕ್ಕೆ ಲೀಜ್!
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 15
ಸಾಮಾನ್ಯವಾಗಿ ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಕನಿಷ್ಠ ರು. 2 ಲಕ್ಷಕ್ಕೆ ಹರಾಜು ಆಗುವ ಅಂದಾಜು ಇದೆ. ಆದರೆ ತಾಲೂಕಿನ ಮುದೇನೂರು ಕೆರೆ ಕೇವಲ ರು. 5 ಸಾವಿರಕ್ಕೆ ಅದು ಹರಾಜು ಪ್ರಕ್ರಿಯೆ ಇಲ್ಲದೇ ಲೀಜ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಂದಿಹಳ್ಳಿ ಗ್ರಾಪಂ ವ್ಯಾಪ್ತಿಯ ಮುದೇನೂರು ಕೆರೆ ಸುಮಾರು 274 ಎಕರೆ ಪ್ರದೇಶ ಹೊಂದಿದೆ. ಇದಕ್ಕೆ ಮಳೆ ನೀರು ಬರದಿದ್ದರೂ ಸಿಂಗಟಾಲೂರು ಏತನೀರಾವರಿ ಯೋಜನೆಯ ನೀರು ಬಿಡಲಾಗುತ್ತಿದೆ. ಇಂತಹ ದೊಡ್ಡ ಕೆರೆಯನ್ನು ಹಿಂದಿನ ಅಧ್ಯಕ್ಷರೊಬ್ಬರ ಅಪ್ಪಣೆಯಂತೆ ಮುದೇನೂರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರಿಗೆ ರು. 5 ಸಾವಿರಕ್ಕೆ ಲೀಜ್ ನೀಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.
ಸಭೆಯಲ್ಲಿ ನಿರ್ಣಯ: ನಂದಿಹಳ್ಳಿ ಗ್ರಾಪಂನಲ್ಲಿ ಎಪ್ರಿಲ್ 20, 2012ರಂದು ಸಾಮಾನ್ಯ ಸಭೆ ಕರೆದು ಮುದೇನೂರು ಗ್ರಾಮದ ಕೆರೆಯಲ್ಲಿ ಮೀನು ಸಾಕಾಣಿಕೆಯ ಟೆಂಡರ್ನ್ನು ಮುದೇನೂರು ಗ್ರಾಮದ ಎಚ್.ಜಿ. ನಾಗರಾಜ ತಂದೆ ಕರಿನೀಲಪ್ಪ ಎಂಬುವವರಿಗೆ ನೀಡಲಾಗಿದೆ. ಪ್ರತಿ ವರ್ಷಕ್ಕೆ ರು. 5 ಸಾವಿರ ಪಾವತಿ ಮಾಡಬೇಕೆಂದು ಸಭೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಗ್ರಾಪಂ ಠರಾವಿನಲ್ಲಿ ಬರೆಯಲಾಗಿದೆ ಎಂಬುದು ಗ್ರಾಮಸ್ಥರ ದೂರು.
ಆದರೆ ಈ ಕುರಿತು ಗ್ರಾಪಂನಲ್ಲಿ ಮಾಹಿತಿ ಕೇಳಿದಾಗ ಬರೆಯಲಾಗಿದ್ದ ಠರಾವನ್ನು ಮತ್ತೆ ಕಿತ್ತು ಹಾಕಿದ್ದಾರೆ. ಕೆರೆಗಳನ್ನು ಗುತ್ತಿಗೆ ನೀಡುವಾಗ ಜಲಾಶಯದ ಶೇ. 50ರಷ್ಟು ವಿಸ್ತೀರ್ಣವನ್ನು ಉಪಯುಕ್ತ ಜಲ ವಿಸ್ತೀರ್ಣ ಪ್ರದೇಶವೆಂದು ಗಣನೆಗೆ ತೆಗೆದುಕೊಂಡು ಪ್ರತಿ ವರ್ಷ ಹೆಕ್ಟೇರ್ಗೆ ರು. 150ಗೆ ಗುತ್ತಿಗೆ ಮೊತ್ತವನ್ನು ನಿಗಧಿ ಪಡಿಸಬೇಕು. ಉಳಿದ 4 ವರ್ಷದ ಅವಧಿಯಲ್ಲಿ ಪ್ರತಿ ವರ್ಷ ಹಿಂದಿನ ಗುತ್ತಿಗೆ ಮೊತ್ತಕ್ಕೆ ಶೇ. 5ರಂತೆ ಮೊತ್ತ ನಿಗಧಿ ಮಾಡಬೇಕೆಂಬ ನಿಯಮ ಗಾಳಿಗೆ ತೊರಿದ್ದಾರೆ.
ನಿಯಮಾನುಸಾರ ಮಾಡಿ: ಗ್ರಾಪಂ ವ್ಯಾಪ್ತಿ ಒಳನಾಡು ಜಲಸಂಪನ್ಮೂಲಗಳ ಮೀನು ಪಾಶುವಾರು ಹಕ್ಕನ್ನು ವಿಲೇವಾರಿ ಮಾಡುವ ಸಂಬಂಧ ಗ್ರಾಪಂಗೆ ಅನ್ವಯವಾಗುವ ನಿಯಮಗಳನ್ನು ಗ್ರಾಪಂ ಅಧಿಕಾರಿಗಳು ಪಾಲನೆ ಮಾಡಿಲ್ಲ. ಸಾಮಾನ್ಯವಾಗಿ ಮೀನು ಪಾಶುವಾರು ಹಕ್ಕಿನ ವಿಲೇವಾರಿಗಾಗಿ ಮೀನುಗಾರಿಕೆ ಫಸಲು ವರ್ಷದ ಜುಲೈನಿಂದ ಮರು ವರ್ಷ ಜೂನ್ 30ರ ವರೆಗೆ ಇರುತ್ತದೆ. ಆದರೆ ಗ್ರಾಪಂನಲ್ಲಿ ಎಪ್ರಿಲ್ನಲ್ಲಿ ಕೆರೆ ಲೀಜ್ ನೀಡಿದ್ದಾರೆ. ಆದರಿಂದ ಈ ಕೂಡಲೇ ತಪ್ಪು ಮಾಡಿರುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ನೀಡಬೇಕು. ಕೆರೆಗಳ ಟೆಂಡರ್ ಪ್ರಕ್ರಿಯೆ ಅನುಸರಿಸಿ ಟೆಂಡರ್ ಮಾಡಬೇಕು.
ಕಾನೂನು ಗಾಳಿಗೆ: ಲೀಜ್ ಪಡೆದ ವ್ಯಕ್ತಿಯು ಲೀಜ್ ಪಡೆದ ದಿನವೇ ಬ್ಯಾಂಕ್ ಅಕೌಂಟ್ಗೆ ರು. 5 ಸಾವಿರ ಪಾವತಿ ಮಾಡಿದ ರಸೀದಿ ಗ್ರಾಪಂನಲ್ಲಿಲ್ಲ. ಯಾವ ಪತ್ರಿಕೆಗೂ ಟೆಂಡರ್ ಪ್ರಕಟಣೆ ನೀಡಿಲ್ಲ. ಗ್ರಾಪಂನ ಕೆಲ ಪಟ್ಟಭದ್ರರು ಗ್ರಾಪಂ ಕಾನೂನುಗಳನ್ನು ಗಾಳಿಗೆ ತೂರಿ ಲೀಜ್ ನೀಡಿದ್ದಾರೆ. ಇದೇ ವ್ಯವಸ್ಥೆ ಮುಂದುವರೆದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ ಗ್ರಾಮಸ್ಥರು.
ಗ್ರಾಪಂ ಬಿಲ್ ಕಲೆಕ್ಟರ್ ಮಲ್ಲೇಶನಾಯ್ಕ ಇವರಿಂದ ಠರಾವು ಪುಸಕ್ತದಲ್ಲಿ ಅಕ್ರಮವಾಗಿ ಬರೆಸಿದ್ದಾರೆ, ಅಂದು ಟೆಂಡರಿನ ಯಾವ ಪ್ರಕ್ರಿಯೆ ನಡೆದಿಲ್ಲ. ಯಾವ ಇಲಾಖೆ ಅಧಿಕಾರಿಗಳು ಬಂದಿಲ್ಲ. ಆದರೆ ಅಂದಿನ ಅಧ್ಯಕ್ಷ ಕೊಟ್ರಯ್ಯ ಖಾಸಗಿ ವ್ಯಕ್ತಿಯೊಬ್ಬರಿಗೆ ಟೆಂಡರ್ ನೀಡಿರುವುದು ಸರಿಯಲ್ಲ ಎನ್ನುತ್ತಾರೆ ಗ್ರಾಪಂ ಉಪಾಧ್ಯಕ್ಷ ಹಾಲೇಶ್. ನಾಗರಾಜಗೆ ಆದ ಟೆಂಡರ್ ರದ್ದುಪಡಿಸಲಾದ ಹಿಂಬರಹ ನೀಡಿರುವ ಗ್ರಾಪಂ ಅಧಿಕಾರಿಗಳು ಈವರೆಗೂ ಯಾಕೆ ಕೆರೆಯನ್ನು ಟೆಂಡರ್ ಕರೆದಿಲ್ಲ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.