ಜೆಡಿಎಸ್ ಮಡಿಲಿಗೆ ಕೊಟ್ಟೂರು ಪಪಂ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 16
ಕೊಟ್ಟೂರು ಪಟ್ಟಣ ಪಂಚಾಯಿತಿಯ ಆಡಳಿತ ಜೆಡಿಎಸ್ ತೆಕ್ಕೆಗೆ ಸಿಗಲು ಅಣಿಯಾಗಿದೆ. ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಬಹುನಿರೀಕ್ಷಿತ ಚುನಾವಣೆ ಸೆ. 17ರಂದು ನಡೆಯಲಿದ್ದು, ಇದು ಜೆಡಿಎಸ್ಗೆ ಬಳ್ಳಾರಿ ಜಿಲ್ಲೆಯ ಏಕೈಕ ಸ್ಥಳೀಯ ಆಡಳಿತ ಎಂದೆನಿಸಿಕೊಳ್ಳಲಿದೆ.
ಕೊಟ್ಟೂರು ಪಟ್ಟಣ ಪಂಚಾಯಿತಿ 20 ಸದಸ್ಯ ಸ್ಥಾನಬಲ ಹೊಂದಿದೆ. ಈ ಪೈಕಿ 18 ಸದಸ್ಯರು ಜೆಡಿಎಸ್ನಲ್ಲೇ ಗುರುತಿಸಿಕೊಂಡಿದ್ದರೆ, ಉಳಿದ ಇಬ್ಬರು ಬಿಜೆಪಿಗೆ ಸೇರಿದವರು. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ನದು ಇಲ್ಲಿ ಶೂನ್ಯ ಸಂಪಾದನೆ. ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಒಬಿಸಿ 2ಎ ಗುಂಪಿಗೆ ಮೀಸಲಾಗಿದೆ.
ಜೆಡಿಎಸ್ಗೆ ನಿರಾಯಾಸ: ಕೊಟ್ಟೂರು ಪಟ್ಟಣದಲ್ಲಿ ಪಕ್ಷಕ್ಕಿಂತ ವ್ಯಕ್ತಿಯದೇ ಪ್ರಧಾನ ಪಾತ್ರ. ಇಲ್ಲಿನ ಪ್ರಭಾವಿ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ತಮ್ಮ ಸ್ವ ಸಾಮರ್ಥ್ಯ ಪಣಕ್ಕಿಟ್ಟು ಪಟ್ಟಣ ಪಂಚಾಯಿತಿ ಆಡಳಿತದಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಈಗ ಹರ್ಷವರ್ಧನ್ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರೊಂದಿಗೆ ಜೆಡಿಎಸ್ನಲ್ಲಿ ಗುರುತಿಸಿಕೊಂಡಿರುವುದರಿಂದ ಜೆಡಿಎಸ್ ನಿರಾಯಾಸವಾಗಿ ಅಧಿಕಾರ ಪಡೆದುಕೊಳ್ಳುವತ್ತ ಮುಂದಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಗೊಳ್ಳುವುದು ಎಲ್ಲರಿಗೂ ವೇದ್ಯವಾದ ಸಂಗತಿ. ಹರ್ಷವರ್ಧನ್ ಮತ್ತು ಭೀಮಾನಾಯ್ಕ ಸೂಚಿಸಿದವರೇ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಾರೆ. ಈ ಸಂಬಂಧ 18 ಸದಸ್ಯರು ಇವರಿಬ್ಬರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಮ್ಮ ಸಹಮತವಿದೆ ಎಂಬುದನ್ನು ಈಗಾಗಲೆ ಘೋಷಿಸಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಅಧ್ಯಕ್ಷ ಸ್ಥಾನಕ್ಕೆ ಪಪಂ ಸದಸ್ಯೆ ಅನುಸೂಯಾ ಸೆರಗಾರ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದ್ದು, ಅವರ ಹೆಸರು ಈಗಾಗಲೆ ಅಘೋಷಿತವಾಗಿ ಪಟ್ಟಣದೆಲ್ಲೆಡೆ ತೇಲಿ ಬರಲಾರಂಭಿಸಿದೆ. ಉಪಾಧ್ಯಕ್ಷ ಸ್ಥಾನಕ್ಕೆ 8 ಸದಸ್ಯರು ಆಕಾಂಕ್ಷಿಗಳಾಗಿದ್ದು, ಈ ಪೈಕಿ 17ನೇ ವಾರ್ಡ್ನ ತೂಲಹಳ್ಳಿ ಮಂಜುನಾಥ, 16ನೇ ವಾರ್ಡ್ನ ಬಿ.ಎಸ್. ವೀರೇಶ್, 11ನೇ ವಾರ್ಡ್ನ ಗುರುಶಾಂತಪ್ಪ, 5ನೇ ವಾರ್ಡ್ನ ಕುರುಬರ ನಾಗಪ್ಪ 15ನೇ ವಾರ್ಡ್ನ ಆಶಾಬೇಗಂ, 14ನೇ ವಾರ್ಡ್ನ ಪ್ರಭುದೇವ್, 10ನೇ ವಾರ್ಡ್ನ ಬಾವಿಕಟ್ಟಿ ಶಿವಾನಂದ ಹೆಸರು ಕೇಳಿಬರುತ್ತಿವೆ. ಈ ಪೈಕಿ ನಾಲ್ವರ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.
ಇಬ್ಬರ ಸೂತ್ರ: ಉಪಾಧ್ಯಕ್ಷ ಸ್ಥಾನಕ್ಕೆ ಕಂಡು ಬಂದಿರುವ ತೀವ್ರ ಪೈಪೋಟಿಯನ್ನು ಗಮನಿಸಿರುವ ಶಾಸಕ ಭೀಮಾನಾಯ್ಕ ಮತ್ತು ಮುಖಂಡ ಹರ್ಷವರ್ಧನ್ ಪ್ರತಿಯೊಬ್ಬರನ್ನು ಸಮಾಧಾನಪಡಿಸುವ ಸೂತ್ರ ತಯಾರಿಸುವತ್ತ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹರ್ಷವರ್ಧನ್ ಸೋಮವಾರ 18 ಸದಸ್ಯರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಉಪಾಹಾರ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಸದಸ್ಯರು ಆಯ್ಕೆಗೊಳಿಸುವ ನಿರ್ಧಾರವನ್ನು ಮುಖಂಡರ ಹೆಗಲಿಗೇರಿಸುವ ನಿಷ್ಠೆ ತೋರಿದರು ಎಂದು ಗೊತ್ತಾಗಿದೆ. ಒಟ್ಟಾರೆ ಯಾವುದೇ ಗೊಂದಲವಿಲ್ಲದೆ ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆ ಮಂಗಳವಾರ ನಡೆಯಲಿದೆ ಎಂದೇ ಹೇಳಬಹುದು.
ಇಂದು ಪ್ರಕಟ...
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಸೂಕ್ತವಾದ ಹೆಸರನ್ನು ಮಂಗಳವಾರ ಬೆಳಗ್ಗೆ ಅಧಿಕೃತವಾಗಿ ಪ್ರಕಟಿಸುತ್ತೇವೆ. ಇದಕ್ಕೆಂದೇ ಶಾಸಕ ಭೀಮಾನಾಯ್ಕ ಮಂಗಳವಾರ ಪಟ್ಟಣಕ್ಕೆ ಆಗಮಿಸಲಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಈಗಲೆ ಏನನ್ನು ಹೇಳುವ ಪ್ರಮೇಯ ಇಲ್ಲ.
- ಎಂ.ಎಂ.ಜೆ. ಹರ್ಷವರ್ಧನ್, ಜೆಡಿಎಸ್ ಮುಖಂಡ
-ಜಿ. ಸೋಮಶೇಖರ