ಪದವಿ ಕಾಲೇಜಿಗೆ ಮೂಲ ಸೌಕರ್ಯ ಒದಗಿಸಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 16
ಇಲ್ಲಿನ ರುದ್ರಾಂಬಾ ಎಂ.ಪಿ. ಪ್ರಕಾಶ್ ಸರ್ಕಾರಿ ಪದವಿ ಕಾಲೇಜಿಗೆ ಅಗತ್ಯ ಮೂಲ ಸೌಕರ್ಯಗಳನ್ನು ನೀಡಬೇಕೆಂದು ಒತ್ತಾಯಿಸಿ ಎಐಡಿಎಸ್‌ಒ ಸಂಘಟನೆ ತಾಲೂಕು ಸಂಚಾಲಕ ರಹಮತ್ ಬೀರಬ್ಬಿ ಇತರರು ತಹಸೀಲ್ದಾರ್‌ಗೆ ಮನವಿಪತ್ರ ನೀಡಿದ್ದಾರೆ.
2007ರಲ್ಲಿ ಆರಂಭವಾಗಿ 7 ವರ್ಷ ಕಳೆದರೂ ಕಾಲೇಜಿಗೆ ಅಗತ್ಯ ಮೂಲ ಸೌಕರ್ಯಗಳಿಲ್ಲ, ಬೋಧನಾ ಕೊಠಡಿ, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕಾಲೇಜಿನಲ್ಲಿ ಬಿಎ, ಬಿಕಾಂ ಮತ್ತು ಬಿಎಸ್ಸಿ ತರಗತಿಗಳಿವೆ. 543 ವಿದ್ಯಾರ್ಥಿನಿಯರು, 379 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 922 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಕಾಲೇಜಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೆ ಇರುವುದರಿಂದ ಅವಶ್ಯಕತೆಗೆ ತಕ್ಕಂತೆ ಸರ್ಕಾರದ ಶಿಕ್ಷಣ ನೀಡುವ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ ಎಂದು ಮನವಿಪತ್ರ ತಿಳಿಸಿದ್ದಾರೆ.
ಕೊಠಡಿ ಇಲ್ಲ: ಕಾಲೇಜಿನಲ್ಲಿ 922 ವಿದ್ಯಾರ್ಥಿಗಳಿಗೆ ಕೇವಲ 2 ಬೋಧನಾ ಕೊಠಡಿಗಳಿವೆ, ಸ್ಥಳದ ಕೊರತೆ ನೀಗಿಸಲು ಸರ್ಕಾರಿ ಪ್ರೌಢಶಾಲೆ ಕೊಠಡಿ ಬಾಗಿಲ ಹೊರಗೆ ಹಾಗೂ ಗಿಡದ ನೆರಳಲ್ಲಿ ಕುಳಿತು ಪಾಠ ಕೇಳುವ ಪರಿಪಾಠವಿದೆ. ಈಗಾಗಲೇ ಕಾಲೇಜು ನಿರ್ಮಾಣಕ್ಕೆ 5 ಎಕರೆ ಜಮೀನು ಇದ್ದು, ಇದರಲ್ಲಿ 2 ಬೋಧನಾ ಕೊಠಡಿ ಮತ್ತು ಪ್ರಾಚಾರ್ಯರ ಕೋಣೆ, ಸಿಬ್ಬಂದಿ ಕೋಣೆ ನಿರ್ಮಾಣ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಇನ್ನು 24 ಕೊಠಡಿಗಳ ಅವಶ್ಯಕತೆ ಇದೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ಕೊಠಡಿಗಳನ್ನು ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಈ ಕಾಲೇಜಿನಲ್ಲಿ ಕೇವಲ 8 ಉಪನ್ಯಾಸಕರಿದ್ದಾರೆ. ಇನ್ನು ಬಿಎ, ಬಿಕಾಂ ವಿದ್ಯಾರ್ಥಿಗಳನ್ನು ಬೋಧಿಸಲು ವಿವಿಧ ವಿಷಯಗಳನ್ನು ಬೋಧಿಸಲು 12 ಉಪನ್ಯಾಸಕರ ಹೆಚ್ಚುವರಿ ಅಗತ್ಯವಿದೆ. ಇನ್ನು ಬಿಎಸ್ಸಿ ವಿಷಯಗಳನ್ನು ಬೋಧಿಸಲು ಉಪನ್ಯಾಸಕರೇ ಇಲ್ಲದಂತಾಗಿದೆ. ಗ್ರಂಥಪಾಲಕರ ಕೆಲಸವನ್ನು ಉಪನ್ಯಾಸಕರೇ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಶೌಚಾಲಯಗಳೆ ಇಲ್ಲದಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಇಷ್ಟೊಂದು ಸಮಸ್ಯೆ ಸುಳಿಯಲ್ಲಿ ಸಿಲುಕಿರುವ ಕಾಲೇಜಿಗೆ ಕಾಯಕಲ್ಪ ನೀಡಬೇಕೆಂದು ಆಗ್ರಹಿಸಿದ್ದಾರೆ.
ಈ ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಅಗತ್ಯ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ. ಎಐಡಿಎಸ್‌ಒ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.