ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸದಾಶಿವ ವರದಿ ಅಂಗೀಕಾರಕ್ಕೆ ಒತ್ತಾಯ

Lingaraj Badiger
Updated On : 17 Sept 2013, 11:42 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 16
ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕಾರಗೊಳಿಸಿ, ಕೇಂದ್ರಕ್ಕೆ ಶಿಫಾರಸು ಮಾಡಲು ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಾದಿಗ ದಂಡೋರ (ಮಾದಿಗ ಮೀಸಲಾತಿ ಹೋರಾಟ ಸಮಿತಿ) ದ ತಾಲೂಕು ಘಟಕದ ವತಿಯಿಂದ ಬಳ್ಳಾರಿಯ ತಹಸೀಲ್ದಾರ್ ಕಚೇರಿ ಮುಂಭಾಗ ಸೋಮವಾರ ಧರಣಿ ನಡೆಸಲಾಯಿತು.
ಮಾದಿಗ ದಂಡೋರ ತಾಲೂಕು ಘಟಕದ ಅಧ್ಯಕ್ಷ ಎಂ. ವೀರೇಶ್ ಧರಣಿಯ ನೇತೃತ್ವ ವಹಿಸಿ ಮಾತನಾಡಿ, ನ್ಯಾ. ಎ.ಜೆ. ಸದಾಶಿವ ಆಯೋಗ ರಚನೆಯಾಗಿ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ, ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಲ್ಲಿ ಮೀನಮೇಷ ಎಣಿಸುತ್ತಿರುವುದಕ್ಕೆ ಕಾರಣವೇನು? ಪರಿಶಿಷ್ಟ ಜಾತಿಯಲ್ಲೇ ಬಹುಸಂಖ್ಯಾತರಾಗಿರುವ ಮಾದಿಗ, ಛಲವಾದಿ ಜನಾಂಗವನ್ನು ಕಡೆಗಣಿಸಿ, ಅಭಿವೃದ್ಧಿಗೆ ಅಡ್ಡಿಯನ್ನುಂಟು ಮಾಡುತ್ತಾ ಜನಾಂಗದ ಮೇಲಿನ ತಾರತಮ್ಯವನ್ನು ನಿಲ್ಲಿಸಿ, ಕೂಡಲೇ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕೇಂದ್ರಕ್ಕೆ ಶಿಫಾರಸು ಮಾಡಿ: ಒಳಮೀಸಲಾತಿಗೆ ಸಂಬಂಧಪಟ್ಟಂತೆ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕು. 10,450 ಜನ ಗ್ರಾಮ ಸಹಾಯಕರನ್ನು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು. ಆರೋಗ್ಯ ಕವಚ 108 ನೌಕರ ನಿರ್ವಹಣೆಯನ್ನು ಜಿ.ವಿ.ಕೆ. ಸಂಸ್ಥೆಯಿಂದ ಹೊರತುಪಡಿಸಿ ಸರ್ಕಾರವೇ ನೇರವಾಗಿ ಚೆಕ್ ಮೂಲಕ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಕಾಯಂಗೊಳಿಸಿ: ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು ರದ್ದುಮಾಡಿ, ದುಡಿಯುವಂತಹ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು. ಎಲ್ಲಾ ಇಲಾಖೆಗಳಲ್ಲಿ ದಿನಗೂಲಿ, ಸಫಾಯಿ ಕರ್ಮಚಾರಿ ಮತ್ತು ಅರೆಕಾಲಿಕ ನೌಕರನ್ನು ಕಾಯಂಗೊಳಿಸಬೇಕು. ಚರ್ಮ ಕುಶಲಕರ್ಮಿ ಕೆಲಸಗಾರರಿಗೆ ವಿಶೇಷ ಸಾಲ ಸೌಲಭ್ಯವನ್ನು ಒದಗಿಸಬೇಕು. ಹೆಚ್ಚುವರಿ ಭೂಮಿ ಮತ್ತು ವಿವಿಧ ಯೋಜನೆಗಳಲ್ಲಿ ಭೂ ಹಂಚಿಕೆ ಮಾಡಿದ್ದು, ಫಲಾನುಭವಿಗಳ ಪಹಣಿಗಳಲ್ಲಿ ಇಲ್ಲಿಯವರೆಗೂ ಸರ್ಕಾರ ಭೂಮಿ ಎಂದು ನಮೂದಿಸಿರುವುದನ್ನು ತೆಗೆದುಹಾಕಲು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಂತರ ಮಾದಿಗ ದಂಡೋರ ನೂರಾರು ಸದಸ್ಯರು ತಹಸೀಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.       
ಧರಣಿಯಲ್ಲಿ ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಕೆ. ಗಿರಿಮಲ್ಲಪ್ಪ, ಉಪಾಧ್ಯಕ್ಷ ಬೆಳಗಲ್ಲು ಹುಲುಗಪ್ಪ, ಪ್ರಧಾನ ಕಾರ್ಯದರ್ಶಿ ಜಗನ್ನಾಥ, ಸಂಘಟನಾ ಕಾರ್ಯದರ್ಶಿ ಯೂ.ವೀರಸ್ವಾಮಿ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕುಮಾರಸ್ವಾಮಿ, ತಾಲೂಕು ಖಜಾಂಚಿ ಸಣ್ಣ ವಂಡ್ರಿ, ನಗರ ಘಟಕದ ಅಧ್ಯಕ್ಷ ಪ್ರಸಾದ್, ನಾಗರಾಜ, ಮಸ್ತಾನ್, ಚಿನ್ನರಾಯುಡು, ಹಲಕುಂದಿ ರಮೇಶ, ಲಕ್ಷ್ಮಣ, ಬಂಗಾರಪ್ಪ, ಮಣಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement