ಕೊಟ್ಟೂರು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವೆ: ಭೀಮಾನಾಯ್ಕ
ಕೊಟ್ಟೂರು: ಜೆಡಿಎಸ್ನ ಶಾಸಕನಾದರೂ ಕೊಟ್ಟೂರನ್ನು ಮಾದರಿ ಪಟ್ಟಣವನ್ನಾಗಿ ಅಭಿವೃದ್ಧಿಪಡಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ಹೆಚ್ಚಿನ ಅನುದಾನ ತರುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಬಿ.ಎಲ್.ಪಿ. ಭೀಮಾನಾಯ್ಕ ಹೇಳಿದರು.
ಪಪಂ ಕಚೇರಿಯಲ್ಲಿ ಮಂಗಳವಾರ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವನ್ನು ತಾವು ಪ್ರತಿನಿಧಿಸದೆ ಇರಬಹುದು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮೊದಲಿನಿಂದಲೂ ಸುಮಧುರ ಬಾಂಧವ್ಯ ಮತ್ತು ಉತ್ತಮ ಸಂಪರ್ಕ ಹೊಂದಿರುವೆ. ಇದು ತಾವು ಕೊಟ್ಟೂರು ಸೇರಿದಂತೆ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನದೊರಕಿಸಿಕೊಡಲು ಸಾಧ್ಯವಾಗುತ್ತದೆ. ಅನುದಾನದ ಕೊರತೆ ಯಾವುದೇ ಹಂತದಲ್ಲಿ ಬಾಧಿಸದಂತೆ ಪ್ರತಿ ಹಂತದಲ್ಲಿ ಎಚ್ಚರವಹಿಸಿ ಕ್ಷೇತ್ರದ ಜನತೆಯ ಹಿತಕಾಪಾಡುತ್ತೇನೆ ಎಂದು ಹೇಳಿದರು. ಕೊಟ್ಟೂರು ಪಟ್ಟಣ ಪಂಚಾಯಿತಿ ಹಾಗೂ ಹಗರಿಬೊಮ್ಮನಹಳ್ಳಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಮೇಲೆ ತೀವ್ರ ಒತ್ತಡ ತಂದಿರುವೆ ಎಂದು ಹೇಳಿದ ಅವರು, ಕೊಟ್ಟೂರು ಪಟ್ಟಣ ಪಂಚಾಯಿತಿಗೆ ಶಾಸಕರಾಗಿ ಆಯ್ಕೆಯಾದ ನಂತರ ರು. 5 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ರು. 2 ಕೋಟಿ ಈಗಾಗಲೇ ಬಿಡುಗಡೆಗೊಂಡಿದೆ. ಉಳಿದ ರು. 3 ಕೋಟಿ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ. ಈ ಅನುದಾನದಿಂದ ಪಟ್ಟಣದ ಸಮಗ್ರ ಅಭಿವೃದ್ಧಿಪಡಿಸಲು ಪಪಂ ಸದಸ್ಯರಿಗೆ ಸೂಚಿಸಿರುವುದಾಗಿ ಹೇಳಿದರು. ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಮಾತನಾಡಿ, ಕೊಟ್ಟೂರು, ಉಜ್ಜಿನಿ ಸುಕ್ಷೇತ್ರವನ್ನು ಯಾತ್ರಾ ಸ್ಥಳಗಳನ್ನಾಗಿ ಘೋಷಿಸಿ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಶಾಸಕರಿಗೆ ಮನವಿ ಮಾಡಿದರು.