ಖಾಸಗಿ ವಾಹನಗಳ ಹಾವಳಿ ತಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 18
ಖಾಸಗಿ ವಾಹನಗಳ ಅನಧಿಕೃತ ಪರವಾನಗಿ ರದ್ದುಪಡಿಸಿ ಸಾರ್ವಜನಿಕ ಸಾರಿಗೆ ಸಂಸ್ಥೆಯನ್ನು ಉಳಿಸಬೇಕು ಎಂದು ಆಗ್ರಹಿಸಿ ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ (ಎಐಟಿಯುಸಿ ಸಂಯೋಜಿತ) ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಘದ ಅಧ್ಯಕ್ಷ ಎಚ್.ಎ. ಆದಿಮೂರ್ತಿ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಬಳ್ಳಾರಿ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಪರವಾನಗಿ ಇಲ್ಲದೇ ಅನೇಕ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೊಕ್ಕಸಕ್ಕೆ ದಿನಕ್ಕೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ. ವಿದ್ಯಾರ್ಥಿ ರಿಯಾಯಿತಿ ಪಾಸ್, ಅಂಗವಿಕಲರ, ಹಿರಿಯ ನಾಗರಿಕರ, ವರದಿಗಾರರ, ಸ್ವಾತಂತ್ರ್ಯ ಹೋರಾಟಗಾರರಿಗೆ ಪಾಸ್ ವಿತರಣೆ ಸೇರಿ ಹಲವು ಸಾಮಾಜಿಕ ಹೊಣೆಗಾರಿಕೆ ಹೊತ್ತಿರುವ ಸಾರಿಗೆ ಸಂಸ್ಥೆಗೆ ಭಾರಿ ನಷ್ಟವಾಗಲಿದ್ದು, ನಿರಂತರ ಸೇವೆ ನೀಡಲು ತೊಂದರೆಯಾಗುತ್ತಿದೆ ಎಂದು ಹೇಳಿದರು.
ಆದೇಶ ಉಲ್ಲಂಘನೆ: ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದೆ. ಸಾಕಷ್ಟು ಖಾಸಗಿ ವಾಹನಗಳಿಗೆ ಅಧಿಕೃತ ಪರವಾನಗಿಯಿಲ್ಲ. ಆದರೂ, ಎಲ್ಲ ರಸ್ತೆಗಳಲ್ಲೂ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿಗಮದ ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ವಾಹನಗಳು ನಿಲ್ಲಬಾರದು ಎಂದು ಹೈಕೋರ್ಟ್ ಆದೇಶಿಸಿದ್ದರೂ, ಕ್ಯಾರೆ ಎನ್ನದ ಖಾಸಗಿ ವಾಹನಗಳ ಮಾಲೀಕರು, ರಾಜಾರೋಷವಾಗಿ ವಾಹನಗಳನ್ನು ನಿಲ್ದಾಣದ ಎದುರಲ್ಲೇ ನಿಲ್ಲಿಸಿ, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ. ಇದಕ್ಕೆ ಪೊಲೀಸ್ ಮತ್ತು ಸಾರಿಗೆ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂಚಾರಕ್ಕೆ ಸಮಸ್ಯೆ: ಖಾಸಗಿ ವಾಹನಗಳು, ಬಸ್ಗಳು, ಮ್ಯಾಕ್ಸಿಕ್ಯಾಬ್, ಆಟೋ ಇತರ ವಾಹನಗಳನ್ನು ನಿಲ್ದಾಣದ ಪಕ್ಕದಲ್ಲೇ ನಿಲ್ಲಿಸುವುದರಿಂದ ಸಾರಿಗೆ ಬಸ್ಗಳು ಸಂಚರಿಸಲು ತೊಂದರೆಯಾಗುತ್ತಿದೆ. ಎಡ, ಬಲಕ್ಕೆ ತಿರುಗುವ ವೇಳೆ ಸಂಚಾರಿ ದಟ್ಟಣೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತು ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕ್ರಮ ಕೈಗೊಳ್ಳಿ: ಸಾರಿಗೆ ನಿಗಮಗಳ ಬಸ್ ನಿಲ್ದಾಣದಿಂದ 500 ಮೀ. ದೂರದಲ್ಲಿ ಖಾಸಗಿ ವಾಹನಗಳ ಮತ್ತು ಅವರ ಏಜೆಂಟ್ಗಳ ಪ್ರವೇಶ ಪ್ರತಿಬಂಧಿಸಬೇಕು. ಖಾಸಗಿ ಬಸ್ಗಳ ರಹದಾರಿಗಳನ್ನು ತಪಾಸಣೆ ಮಾಡಿ ರಹದಾರಿ ಇಲ್ಲದ ಅಥವಾ ನಕಲಿ ರಹದಾರಿ ಇರುವ ವಾಹನಗಳನ್ನು ರದ್ದು ಮಾಡಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಗರದ ಹಳೇ ಬಸ್ ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಯಲ್ ವೃತ್ತದ ಮೂಲಕ ಹಾದು ಜಿಲ್ಲಾಧಿಕಾರಿ ಕಚೇರಿ ತಲುಪಿತು. ಅನಂತರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಂಟಿ ಕಾರ್ಯದರ್ಶಿ ರಾಜಗೋಪಾಲ್, ಪ್ರಧಾನ ಕಾರ್ಯದರ್ಶಿ ಎ.ಆರ್.ಎಂ. ಇಸ್ಮಾಯಿಲ್, ಉಪಾಧ್ಯಕ್ಷ ಟಿ. ಚನ್ನಪ್ಪ, ಕಾಂತಯ್ಯ ಗುತ್ತರಗಿಮಠ ಸೇರಿದಂತೆ ನೂರಾರು ಕಾರ್ಮಿಕರು, ನೌಕರರು ಪಾಲ್ಗೊಂಡಿದ್ದರು.
ಆದೇಶ ಉಲ್ಲಂಘನೆ
ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಹಾವಳಿ ಹೆಚ್ಚಾಗಿದೆ. ಹಲವು ಖಾಸಗಿ ವಾಹನಗಳಿಗೆ ಅಧಿಕೃತ ಪರವಾನಗಿಯಿಲ್ಲ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿಗಮದ ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ವಾಹನಗಳು ನಿಲ್ಲಬಾರದು ಎಂದು ಹೈಕೋರ್ಟ್ ಆದೇಶಿಸಿದ್ದರೂ, ಕ್ಯಾರೆ ಎನ್ನದ ಖಾಸಗಿ ವಾಹನಗಳ ಮಾಲೀಕರು, ರಾಜಾರೋಷವಾಗಿ ವಾಹನಗಳನ್ನು ನಿಲ್ದಾಣದ ಎದುರಲ್ಲೇ ನಿಲ್ಲಿಸಿ, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ. ಇದಕ್ಕೆ ಪೊಲೀಸ್ ಮತ್ತು ಸಾರಿಗೆ ಇಲಾಖೆಗಳ ನಿರ್ಲಕ್ಷ್ಯವೇ ಕಾರಣ.