ವೈಚಾರಿಕತೆ ರೂಢಿಸಿಕೊಳ್ಳಿ: ಪಂಪಾಪತಿ
ಹೊಸಪೇಟೆ: ಪ್ರತಿಯೊಬ್ಬರೂ ವೈಚಾರಿಕ ಮನೋಭಾವನೆ ರೂಢಿಸಿಕೊಂಡು ಉತ್ತಮ ನಾಗರಿಕರಾಗಿ ಜೀವಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಪಂಪಾಪತಿ ಹೇಳಿದರು.
ಸ್ಲಂ ಜನಾಂದೋಲನ, ಸ್ಲಂ ಜನಜಾಗೃತಿ ಆಂದೋಲನ ಸಮಿತಿಯ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಪೆರಿಯಾರ್ ರಾಮಸ್ವಾಮಿ ಅವರ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೆರಿಯಾರ್ ರಾಮಸ್ವಾಮಿ ಅವರು ಜಾತಿ ರಹಿತ ಸಮಾಜ ಸ್ಥಾಪನೆ, ಸಾಮಾಜಿಕ ಆರ್ಥಿಕ ಸಮಾನತೆ, ಮಹಿಳಾ ಹಕ್ಕು ಹೋರಾಟ, ಅಂತರ್ಜಾತಿ ವಿವಾಹ ಸೇರಿದಂತೆ ಪ್ರಗತಿಪರ ವಿಚಾರಗಳ ಬಗ್ಗೆ ನಿರಂತರವಾಗಿ ಹೋರಾಡಿದ ವ್ಯಕ್ತಿ ಪೆರಿಯಾರ್ ಕುರಿತು ವಿವರಿಸಿದರು.
ಸ್ಲಂ ಸಮಿತಿ ಸಂಚಾಲಕ ಎನ್. ಹುಲಿಗೆಮ್ಮ ಮಾತನಾಡಿ, ಪೆರಿಯಾರ್ ಅವರು ದೈವ ವಿರೋಧಿಯಾಗಿ ಮೂಢನಂಬಿಕೆ, ವಿಗ್ರಹ ಪೂಜೆ, ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಿದ್ದರು. ಸದಾ ವೈಚಾರಿಕ ಮನೋಭಾವನೆಯನ್ನು ಜನರು ರೂಢಿಸಿಕೊಳ್ಳಬೇಕು ಎಂದು ಸಂದೇಶ ಸಾರಿದ ವ್ಯಕ್ತಿ. ಇಂದು ಇಂತಹ ಆದರ್ಶ ವ್ಯಕ್ತಿಗಳ ವಿಚಾರ, ಹೋರಾಟಗಳು ಇಲ್ಲದಿರುವುದು ಖೇದಕರ ಸಂಗತಿ ಎಂದರು.
ಪೆರಿಯಾರ್ ರಾಮಸ್ವಾಮಿ ಜಯಂತಿ ಅಂಗವಾಗಿ ಮಹಿಳೆಯರಿಗಾಗಿ ಮ್ಯೂಜಿಕಲ್ ಚೇರ್, ರೊಟ್ಟಿ ಮಾಡುವ ಸ್ಪರ್ಧೆ, ಕುಂಟಾಟ, ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರೋಟರಿ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಶ್ರೀನಿವಾಸ್ರಾವ್, ಕಾರ್ಯದರ್ಶಿ ಸಯ್ಯದ್ ಮಹಮ್ಮದ್, ಮಹಿಳಾ ಘಟಕದ ಅಧ್ಯಕ್ಷೆ ಮೈಮುನ್ನೀಸ ಸೇರಿದಂತೆ ಇತರರು ಭಾಗವಹಿಸಿದ್ದರು.