ನಾಳೆ ಪ್ರತಿಭಾ ಪುರಸ್ಕಾರ, ಬೃಹತ್ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 20
ಬಳ್ಳಾರಿ ಜಿಲ್ಲಾ ಆರ್ಯ ವೈಶ್ಯ ಸಮಾಜ ಮತ್ತು ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಸಹಯೋಗದಲ್ಲಿ ಸೆ. 22ರಂದು ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರ್ಯ ವೈಶ್ಯ ಸಂಘದ ಕಾರ್ಯದರ್ಶಿ ಸೊಂತ ಗಿರಿಧರ್ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಅವರ ಸಾನ್ನಿಧ್ಯದಲ್ಲಿ ಅವರ ಆಶೀರ್ವಚನದೊಂದಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಂಗಳೂರಿನ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ.ಎಲ್. ಸುಧೀರ್ ಮೆರವಣಿಗೆಗೆ ಚಾಲನೆ ನೀಡಲಿದ್ದು, ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಬಿ.ಜಿ. ನಂದಕಿಶೋರ್ ಅವರು ದಿ. ಡಿ.ಎಲ್. ಚೆಟ್ಟಿ ಸಭಾಂಗಣ ಉದ್ಘಾಟಿಸಲಿದ್ದಾರೆ ಎಂದರು.
ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ಬೆಂಗಳೂರಿನ ಹೆಬ್ಬಾಳ ಶಾಸಕ ಆರ್. ಜಗದೀಶ್ ಕುಮಾರ್ ಸೇರಿದಂತೆ ರಾಜ್ಯದ ಪೌರ ಸಂಸ್ಥೆಗಳ ಆರ್ಯವೈಶ್ಯ ಕೌನ್ಸಿಲರ್-ಕಾರ್ಪೋರೇಟರ್ಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ವೃತ್ತಿಪರ ಶಿಕ್ಷಣ, ಸಿಎ ಇತರೆ ಕೋರ್ಸ್ಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್, ರ್ಯಾಂಕ್ಗಳಲ್ಲಿ ಉತ್ತಿರ್ಣರಾದ ಆರ್ಯ ವೈಶ್ಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ. ಎರಡು ಸಾವಿರ ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದಿದ್ದವು. ಈ ಪೈಕಿ 800 ವಿದ್ಯಾರ್ಥಿಗಳನ್ನು ಸೆ. 22ರಂದು ಅಭಿನಂದಿಸಿ, ಪುರಸ್ಕರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿ ಆದಿನಾರಾಯಣ ಮಾತನಾಡಿ, ಸೆ. 22ರಂದು ಬೆಳಗ್ಗೆ 8 ಗಂಟೆಗೆ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಆರ್ಯ ವೈಶ್ಯ ಸಮಾಜದ ಸಾವಿರಾರು ಬಂಧುಗಳು ಬೃಹತ್ ಮೆರವಣಿಗೆ ಮೂಲಕ ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಮೋತಿ ವೃತ್ತ, ಸ್ಟೇಷನ್ ರಸ್ತೆಯ ಮೂಲಕ ಮತ್ತೆ ಮುನ್ಸಿಪಲ್ ಹೈಸ್ಕೂಲ್ ಮೈದಾನಕ್ಕೆ ತೆರಳಲಿದ್ದಾರೆ. ಈ ಮೆರವಣಿಗೆಯಲ್ಲಿ ಆನೆಗಳು, ಒಂಟೆಗಳು, ಕುದುರೆಗಳು ವಿಶೇಷ ಆಕರ್ಷಣೆಯಾಗಲಿವೆ ಎಂದರು.
ಅನಂತರ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಆರ್.ಪಿ. ರವಿಶಂಕರ್, ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷ ಉದ್ಯಮಿ ಡಾ. ಡಿ.ಎಲ್. ರಮೇಶ್ ಗೋಪಾಲ್ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು, ನಗರದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿಯ ಹಿರಿಯ ಸಮಾಜ ಸೇವಾಕರ್ತರಾದ ನಾಮಾರತ್ನಯ್ಯ, ಎಸ್ಜಿಟಿ ಕಾಲೇಜಿನ ಉಪನ್ಯಾಸಕ, ಲೇಖಕ ಬಾಲ ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು ಎಂದು ಆದಿ ನಾರಾಯಣ ತಿಳಿಸಿದರು.
ಪತ್ತಿಗೋಪಾಲ್, ಮುತ್ಯಾಲ ರಮೇಶ್, ಜಂಟಿ ಕಾರ್ಯದರ್ಶಿ ನಾಮಾ ರಮೇಶ್ ಇತರರು ಇದ್ದರು.