ನೀರಾವರಿ ಯೋಜನೆಗೆ ಕಾಯಕಲ್ಪ ಸನ್ನಿಹಿತ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 20
ಬಳ್ಳಾರಿ ಜಿಲ್ಲೆಯ ಬಹುದಿನಗಳ ಕನಸಾದ ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರಿನ ಸಂಗ್ರಹಕ್ಕೆ ಸಮಾಂತರ ಜಲಾಶಯ ನಿರ್ಮಾಣ ಸೇರಿದಂತೆ ನೀರಾವರಿ ಪ್ರಮುಖ ಯೋಜನೆಗಳಿಗೆ ಕಾಯಕಲ್ಪ ಕಾಲ ಸನ್ನಿಹಿತವಾಗಿದೆ. ಕಾರಣ ರಾಜ್ಯದ ನೀರಾವರಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾಗಿ ಬಳ್ಳಾರಿ ಹಾಗೂ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ ನುರಿತ ನಿವೃತ್ತ ಅಧಿಕಾರಿ, ನೀರಾವರಿ ತಜ್ಞ ರುದ್ರಸ್ವಾಮಿ ಅವರನ್ನು ಆಯ್ಕೆ ಮಾಡಿರುವುದು. ಈ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳಿಗೆ ಜೀವಕಳೆ ತುಂಬುವ ಲಕ್ಷಣಗಳು ಗೋಚರಿಸುತ್ತಿವೆ.
ಹೈದರಾಬಾದ್ ಕರ್ನಾಟಕ ಹಿಂದುಳಿಯುತ್ತದೆ ಎನ್ನುವುದಕ್ಕೆ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ವಿಧಾನಸಭೆ, ವಿಕಾಸಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಈ ಭಾಗದವರು ಅಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎನ್ನುವ ಆರೋಪವಿದೆ.
ನೀರಾವರಿ ಯೋಜನೆಗಳ ಜಾರಿಯಲ್ಲಿ ಸಮಿತಿ ಪಾತ್ರ: ನೀರಾವರಿ ಕುರಿತಾದ ಯೋಜನೆಗಳು ಜಾರಿಗೊಳಿಸುವಲ್ಲಿ ಯೋಜನೆಗಳಿಗೆ ತಾಂತ್ರಿಕ ಅನುಮೋದನೆ ನೀಡುವಲ್ಲಿ ರಾಜ್ಯ ನೀರಾವರಿ ತಾಂತ್ರಿಕ ಸಲಹಾ ಸಮಿತಿಯ ಅನುಮತಿ ತೀರಾ ಮುಖ್ಯ ಹಾಗೂ ಪ್ರಮುಖ ಪಾತ್ರವಹಿಸುತ್ತದೆ. ಓರ್ವ ಅಧ್ಯಕ್ಷ ಹಾಗೂ 5 ಜನ ನೀರಾವರಿ ಇಲಾಖೆಯಲ್ಲಿ ನಿವೃತ್ತ ಅಧಿಕಾರಿಗಳು, ನೀರಾವರಿ ತಜ್ಞರು ಸಮಿತಿ ಸದಸ್ಯರಾಗಿರುತ್ತಾರೆ. ಸಮಿತಿಯ ಐವರು ಸದಸ್ಯರಲ್ಲಿ ರುದ್ರಸ್ವಾಮಿ ಅವರು ಒಬ್ಬರಾಗಿದ್ದಾರೆ. ಈ ಭಾಗದ ರೈತರಲ್ಲಿ ಇಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಸೇರಿದಂತೆ ಬಹುನಿರೀಕ್ಷಿತ ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಸಮಾಂತರ ಜಲಾಶಯದ ನಿರ್ಮಾಣಕ್ಕೆ ಮರುಜೀವ ಬಂದಂತಾಗಿದೆ. ರುದ್ರಸ್ವಾಮಿ ಅವರನ್ನು ತಾಂತ್ರಿಕ ಸಮಿತಿಗೆ ಸದಸ್ಯರಾಗಿ ನೇಮಕ ಮಾಡುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ಎನ್. ಪ್ರತಾಪ ರೆಡ್ಡಿ ಸೇರಿದಂತೆ ಕಾಂಗ್ರೆಸ್ನ ಮುಖಂಡರು ನೀರಾವರಿ ಸಚಿವರಿಗೆ ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪರ್ಯಾಯ ವ್ಯವಸ್ಥೆ ನಿರೀಕ್ಷಿತ: ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ವರ್ಷದಿಂದ ವರ್ಷಕ್ಕೆ ಹೂಳಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಹಿಂದಿನ ರಾಜ್ಯ ಸರ್ಕಾರ ಹೂಳೆತ್ತುತ್ತೇವೆ ಎಂದು ಹೇಳುವ ಮೂಲಕ ಜನರನ್ನು ದಾರಿ ತಪ್ಪಿಸಿತ್ತು. ಇದೀಗ ರಾಜ್ಯ ಸರ್ಕಾರ ತುಂಗಭದ್ರಾ ಹೆಚ್ಚುವರಿ ನೀರು ಹರಿದು ಹೋಗದಂತೆ ಹಾಗೂ ಜಲಾಶಯದ ನೀರು ಸಂಗ್ರಹ ಪ್ರಮಾಣದ ಪರ್ಯಾಯ ವ್ಯವಸ್ಥೆ ಬಗ್ಗೆ ನೀರಾವರಿ ತಜ್ಞರ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಇದೀಗ ತಾಂತ್ರಿಕ ಸಲಹಾ ಸಮಿತಿಯಲ್ಲಿಯೇ ಈ ಭಾಗದ ರುದ್ರಸ್ವಾಮಿ ಅವರು ಸೇವೆ ಸಲ್ಲಿಸಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಪರ್ಯಾಯ ವ್ಯವಸ್ಥೆ, ಸಮಾಂತರ ಜಲಾಶಯ ನಿರ್ಮಾಣ ವಿಷಯದಲ್ಲಿ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆ ಎನ್ನಬಹುದು.
ಇನ್ನು ವೈ. ಕಗ್ಗಲ್ ಏತನೀರಾವರಿ ಸೇರಿದಂತೆ ಜಿಲ್ಲೆಯ ಇತರೆಡೆ ನೆನೆಗುದಿಗೆ ಬಿದ್ದಿರುವ ಯೋಜನೆಗಳು ತಾರ್ಕಿಕವಾಗಿ ಪೂರ್ಣಗೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರುವ ಸಾಧ್ಯತೆ ಹೆಚ್ಚಾಗಿವೆ.
ನುರಿತ ನೀರಾವರಿ ತಜ್ಞ ರುದ್ರಸ್ವಾಮಿ: ರುದ್ರಸ್ವಾಮಿ ಅವರು 1961ರಲ್ಲಿ ಸಿರುಗುಪ್ಪದ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರಾಗಿ ವೃತ್ತಿ ಆರಂಭಿಸಿ, ಮಲಪ್ರಭಾ, ಘಟಪ್ರಭಾ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಮಲಪ್ರಭಾದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ, ಕುಷ್ಟಗಿ ಸಣ್ಣ ನೀರಾವರಿ ಇಲಾಖೆಯಲ್ಲಿ, ಬಳ್ಳಾರಿ ಲೋಕೋಪಯೋಗಿ ಇಲಾಖೆ, ಧಾರವಾಡದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮುನಿರಬಾದ್ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರಾಗಿ 1998ರಲ್ಲಿ ನಿವೃತ್ತಿಯಾಗಿದ್ದರು. ಇದೀಗ ಅವರನ್ನು ತಾಂತ್ರಿಕ ಸಲಹಾ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಈ ಭಾಗದ ರೈತರಲ್ಲಿ ಸಂತಸವನ್ನುಂಟು ಮಾಡಿದೆ.
ತಾಂತ್ರಿಕ ಸಲಹಾ ಸಮಿತಿಗೆ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ದೇಸಾಯಿ ಅವರು ಅಧ್ಯಕ್ಷರಾದರೆ, ಕೆ. ಶಿವಶಂಕರ್, ಎಲ್. ಬಸವರಾಜ್, ರುದ್ರಸ್ವಾಮಿ, ಮಗದಾಳೆ, ಶ್ರೀಧರ್ ಅವರು ಸದಸ್ಯರಾಗಿ ನೇಮಕವಾಗಿದ್ದಾರೆ.
- ಶಶಿಧರ ಮೇಟಿ