ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಕ್ರಮ ಮರಳು ಸಾಗಾಟಕ್ಕೆ ಕಡಿವಾಣ

Vishwanath S
Updated On : 22 Sept 2013, 12:07 pm

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 21
ಅಪ್ಪೇನಹಳ್ಳಿ ಕೆರೆಯಿಂದ ಅಕ್ರಮವಾಗಿ ಮರಳು ಸಾಗಾಟ ತಡೆಗೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆದರೆ ಅಪ್ಪೇನಹಳ್ಳಿ - ಸುತ್ತಮುತ್ತಲ ಗ್ರಾಮಗಳ ಕೆಲವು ಮುಖಂಡರ ನಡುವೆ ಮರಳು ಸಾಗಾಣಿಕೆ ವಿಷಯಕ್ಕೆ ಸಂಬಂಧಿಸಿದಂತೆ ವಾದ-ವಿವಾದ ನಡೆದಿದೆ.
'ಅಕ್ರಮ ಮರುಳು ದಂಧೆಗಿಲ್ಲ ಕಡಿವಾಣ' ಎನ್ನುವ ಶೀರ್ಷಿಕೆಯಡಿ ಶನಿವಾರ 'ಕನ್ನಡಪ್ರಭ'ದಲ್ಲಿ ತಾಲೂಕಿನ ಅಪ್ಪೇನಹಳ್ಳಿ ಕೆರೆಯಲ್ಲಿ ಅಕ್ರಮ ಮರುಳು ಸಾಗಿಸುತ್ತಿರುವ ಬಗ್ಗೆ ಬೆಳಕು ಚೆಲ್ಲಲಾಗಿತ್ತು.
ಸೆ. 17ರಂದು ಅಪ್ಪೇನಹಳ್ಳಿ ಕೆರೆಯಲ್ಲಿ ಮರಳು ಸಾಗಿಸಲು ಬಂದಿದ್ದ ಲಾರಿಗಳು ಹಾಗೂ ಜೆಸಿಬಿ ಯಂತ್ರವನ್ನು ಗುಡೇಕೋಟೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಕೆಲವು ಹಿತಾಸಕ್ತಿಗಳು ರಾತ್ರೋರಾತ್ರಿ ಮತ್ತೆ ಕೆರೆಗೆ ಹೋಗಲು ರಸ್ತೆ ಮಾಡಿಕೊಂಡು  ಮಂಗಳವಾರವೇ ಪ್ರಥಮ ಬಾರಿಗೆ ಬೆಂಗಳೂರು ಕಡೆಯ ಲಾರಿಗಳನ್ನು ತರಿಸಿದ್ದಾರೆ. ಮರಳು ಸಾಗಿಸಲು ಸಿದ್ಧವಾಗುವ ಮುಂಚೆಯೇ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್ ರಾಠೋಡ್ ಆದೇಶದಂತೆ ಲಾರಿಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಕೂಡ್ಲಿಗಿ ಸಿಪಿಐ ಓ.ಬಿ. ಕಲ್ಲೇಶಪ್ಪ ತಿಳಿಸಿದ್ದಾರೆ.
ವಾಗ್ವಾದ: ಮರಳು ಸಾಗಾಟ ವಿಷಯದಲ್ಲಿ ಅಪ್ಪೇನಹಳ್ಳಿ ಸುತ್ತಮುತ್ತಲ ಹಳ್ಳಿಗಳಲ್ಲಿ ಎರಡು ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯವಿದೆ. ಕೆಲವರು ಅಕ್ರಮ ಮರಳು ಸಾಗಿಸಲು ಹಕ್ಕು ಸ್ಥಾಪಿಸಲು ಯತ್ನಿಸುತ್ತಿದ್ದಾರೆ. ಅದಕ್ಕೆ ಇನ್ನೊಂದು ಗುಂಪಿನವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳೂ ಪರಸ್ಪರ ದೂರು ನೀಡಿದ್ದಾರೆ. ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಗೊಂದಲವಾಗಿದೆ, ಹೀಗಾಗಿ ಕ್ರಮ ಕೈಗೊಳ್ಳಲು ವಿಳಂಬವಾಗಿರಬಹುದು ಎಂದು ಸ್ಥಳೀಯರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಒಂದು ಗುಂಪಿನ ಯುವಕರು ರಾತ್ರೋರಾತ್ರಿ ಬಳ್ಳಾರಿ ಜಿಲ್ಲಾಧಿಕಾರಿಯವರಿಗೆ ಈ ವಿಷಯವನ್ನು ದೂರವಾಣಿ ಮೂಲಕ ತಿಳಿಸಿದ್ದಾರೆ. ಆಗ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ್ಲಿಗಿ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಗ ಕೂಡ್ಲಿಗಿ ಸಿಪಿಐ ಕಲ್ಲೇಶಪ್ಪ ಮಂಗಳವಾರ ರಾತ್ರಿ ಅಪ್ಪೇನಹಳ್ಳಿ ಕೆರೆಗೆ ಹೋಗಿ ಲಾರಿಗಳು ಹಾಗೂ ಜೆಸಿಬಿ ಯಂತ್ರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಗ್ರಾಮದ ಎರಡು ಬಣಗಳ ನಡುವಿನ ತಿಕ್ಕಾಟದಿಂದ ಪೊಲೀಸರು ಪೇಚಿಗೆ ಸಿಲುಕಿದ್ದರು. ಆದರೆ ಈಗ ಅಪ್ಪೇನಹಳ್ಳಿ ಕೆರೆಯಿಂದ ಒಂದೇ ಒಂದು ಟ್ರ್ಯಾಕ್ಟರ್ ಮರಳೂ ಹೊರಗಡೆ ಹೋಗುತ್ತಿಲ್ಲ. ಅಪ್ಪೇನಹಳ್ಳಿ ಸುತ್ತಮುತ್ತಲ ಹಳ್ಳಿಗಳ ಜನತೆ ಅಪ್ಪೇನಹಳ್ಳಿ ಕೆರೆಗೆ ಮರಳು ತರಲು ಹೋಗಲು ಹೆದರುತ್ತಿದ್ದಾರೆ. ಪತ್ರಿಕೆ ವರದಿ ಬಗ್ಗೆ ಈ ಭಾಗದ ಪ್ರಜ್ಞಾವಂತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವು ಹಿತಾಸಕ್ತಿಗಳು ರಾತ್ರೋರಾತ್ರಿ ಮತ್ತೆ ಕೆರೆಗೆ ಹೋಗಲು ರಸ್ತೆ ಮಾಡಿಕೊಂಡು  ಮಂಗಳವಾರವೇ ಪ್ರಥಮ ಬಾರಿಗೆ ಬೆಂಗಳೂರು ಕಡೆಯ ಲಾರಿಗಳನ್ನು ತರಿಸಿದ್ದಾರೆ. ಮರಳು ಸಾಗಿಸಲು ಸಿದ್ಧವಾಗುವ ಮುಂಚೆಯೇ ಪೊಲೀಸ್ ವರಿಷ್ಠಾಧಿಕಾರಿ ಚೇತನ್‌ಸಿಂಗ್ ರಾಠೋಡ್ ಆದೇಶದಂತೆ ಲಾರಿಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.
-ಓ.ಬಿ. ಕಲ್ಲೇಶಪ್ಪ,
ಕೂಡ್ಲಿಗಿ ಸಿಪಿಐ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement