ಜೆಸ್ಕಾಂ ಕಚೇರಿ ಎತ್ತಂಗಡಿ: 30ಕ್ಕೆ ಹಗರಿಬೊಮ್ಮನಹಳ್ಳಿ ಬಂದ್
ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿಗೆ ಮಂಜೂರಾಗಿರುವ ಜೆಸ್ಕಾಂ ವಿಭಾಗೀಯ (ಗ್ರಾಮೀಣ) ಕಚೇರಿಯನ್ನು ಹೂವಿನಹಡಗಲಿಗೆ ಎತ್ತಂಗಡಿ ಮಾಡುವ ಹುನ್ನಾರವನ್ನು ವಿರೋಧಿಸಿ, ಇಲ್ಲಿಯೆ ಜೆಸ್ಕಾಂ ವಿಭಾಗೀಯ ಕಚೇರಿ ಆರಂಭಿಸುವಂತೆ ಆಗ್ರಹಿಸಿ ಸೆ. 30ರಂದು ಹಗರಿಬೊಮ್ಮನಹಳ್ಳಿ ಬಂದ್‌ಗೆ ರಾಜ್ಯ ರೈತಸಂಘ ಸೇರಿದಂತೆ ವಿವಿಧ ಸಂಘಟನೆಗಳು ಕರೆ ನೀಡಿವೆ.
ಗುರುವಾರ ಮಧ್ಯಾಹ್ನ ಪಟ್ಟಣದ ರಾಮನಗರದ ಶ್ರೀಈಶ್ವರ ದೇವಸ್ಥಾನದ ಆವರಣದಲ್ಲಿ ರಾಜ್ಯ ರೈತಸಂಘ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ನೀರು ಮತ್ತು ವಿದ್ಯುತ್ ಬಳಕೆದಾರರ ಸಂಘ, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವರ್ತಕರ ಯೂನಿಯನ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಜೆಸ್ಕಾಂ ವಿಭಾಗೀಯ ಕಚೇರಿ ಸ್ಥಳಾಂತರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಕಚೇರಿ ಉಳಿಸಿಕೊಳ್ಳಲು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂಬ ಒಮ್ಮತದ ನಿರ್ಧಾರ ಕೈಗೊಂಡರು. ರಾಜ್ಯ ರೈತ ಸಂಘದ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ. ವೀರಸಂಗಯ್ಯ ಮಾತನಾಡಿ, ಬಹು ವರ್ಷಗಳನಂತರ ಸರ್ಕಾರದ ಪ್ರಮುಖ ಕಚೇರಿಯೊಂದು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಕಾರ್ಯಾರಂಭ ಮಾಡುವ ಸುದ್ದಿ ನಿಜಕ್ಕೂ ಸಿಹಿಯಾಗಿತ್ತು. ಆದರೆ ಈಗ ಮಂಜೂರಾಗಿರುವ ಕಚೇರಿಯನ್ನು ಎತ್ತಗಂಡಿ ಮಾಡಲು ಹುನ್ನಾರ ನಡೆದಿದೆ ಎಂಬ ಸುದ್ದಿ ತಾಲೂಕಿನ ಜನತೆಗೆ ಕಹಿಯನ್ನುಂಟು ಮಾಡಿದೆ. ಬೆಳೆಯುತ್ತಿರುವ ಹಗರಿಬೊಮ್ಮನಹಳ್ಳಿ ವಿಭಾಗೀಯ ಕಚೇರಿಗಳನ್ನು ಹೊಂ ದಲು ಎಲ್ಲ ರೀತಿಯ ಆರ್ಹತೆ ಹೊಂದಿದೆ. ಆದರೆ ಇಲ್ಲಿಯವರೆಗೂ ಈ ತಾಲೂಕಿಗೆ ಸಾಕಷ್ಟು ಅನ್ಯಾಯ ಮಾಡಲಾಗಿದೆ. ಇನ್ನೂ ಮುಂದೆ ಆ ರೀತಿಯ ಅನ್ಯಾಯವಾಗಲು ನಾವು ಬೀಡಬಾರದು. ಎಲ್ಲರೂ ಒಗ್ಗಟಿನಿಂದ ಹೋರಾಟಕ್ಕೆ ಇಳಿಯಬೇಕೆಂದರು.
ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ ಮಾತನಾಡಿ, ಹಗರಿಬೊಮ್ಮನಹಳ್ಳಿ ವಿಚಾರದಲ್ಲಿ ಈ ಹಿಂದಿನ ಸರ್ಕಾರಗಳಲ್ಲಿ ಸಾಕಷ್ಟು ಸಲ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಈಗ ಮತ್ತೆ ಅದು ಮುಂದುವರೆದಿರುವುದು ದುರದೃಷ್ಟಕರ ಸಂಗತಿ ಎಂದರು. ಸೆ. 30ರ ಒಳಗಡೆ ಕಚೇರಿ ಹಗರಿಬೊಮ್ಮನಹಳ್ಳಿಯಲ್ಲಿಯೇ ಕಾರ್ಯಾರಂಭ ಮಾಡುತ್ತದೆ ಎಂದು ಮತ್ತೊಮ್ಮೆ ಅಧಿಕೃತ ಆದೇಶ ಹೊರಡಿಸಬೇಕು, ಈಗ ನಡೆದಿರುವ ಎತ್ತಂಗಡಿ ಹುನ್ನಾರ ನಿಲ್ಲಿಸಬೇಕು, ಒಂದು ವೇಳೆ ನಾವು ನೀಡಿದ ಗಡುವಿನೊಳಗಡೆ ಪ್ರಕ್ರಿಯೆಗಳು ಆಗದಿದ್ದರೆ ಸೆ. 30ರಂದು ಹಗರಿಬೊಮ್ಮನಹಳ್ಳಿ ಬಂದ್‌ಗೆ ಕರೆ ನೀಡಿ ನಂತರ ಹೋರಾಟವನ್ನು ನಿರಂತರಗೊಳಿಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯ ರೈತ ಸಂಘದ ಅಧ್ಯಕ್ಷ ಬಿ.ಗೋಣಿಬಸಪ್ಪ, ಸೂರಿಬಾಬು, ಬನ್ನಿಗೊಳ ವೆಂಕಣ್ಣ, ನೀರು ಮತ್ತು ವಿದ್ಯುತ್ ಬಳಕೆದಾರರ ಸಂಘದ ಸಂಚಾಲಕ ಅಂಗಡಿ ಗವಿಸಿದ್ದಪ್ಪ, ಇತರರು ಸಭೆಯಲ್ಲಿದ್ದರು.