ಸಿ ಕೆಟಗರಿ 51 ಗಣಿ ಕಂಪನಿ ಕಪ್ಪುಪಟ್ಟಿಗೆ ಸೇರಿಸಿ: ಹಿರೇಮಠ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 21
ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಸಿ ಕೆಟಗರಿಯ 51 ಗಣಿ ಕಂಪನಿಗಳ ಲೈಸೆನ್ಸ್ ರದ್ದು ಮಾಡಿದರಷ್ಟೇ ಸಾಲದು, ಅವರೆಲ್ಲರನ್ನೂ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ತಿಳಿಸಿದರು.
ಶನಿವಾರ ನಗರದ ಮಯೂರ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ ಕೆಟಗರಿಯಲ್ಲಿರುವ ಗಣಿ ಕಂಪನಿಗಳು ರದ್ದುಪಡಿಸಿದರೆ ಸಾಲದು, ಅವರೆಲ್ಲರನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಅವರು ಗಣಿಗಾರಿಕೆಯಲ್ಲಿ ಪಾಲ್ಗೊಳ್ಳದಂತೆ ಕ್ರಮ ಜರುಗಿಸಬೇಕು. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದುದ್ದಕ್ಕೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಅ. 12ರಂದು ಚಿಂತನಾ ಶಿಬಿರ: ಅಕ್ರಮ ಗಣಿಗಾರಿಕೆ, ಭೂ ಕಬಳಿಕೆದಾರರ ವಿರುದ್ಧ ಕ್ರಮ, ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು ಸೇರಿದಂತೆ ಇತರೆ ಪ್ರಮುಖ ವಿಷಯಗಳ ಚರ್ಚಿಸಿ, ನಿರ್ಣಯಗಳನ್ನು ಕೈಗೊಳ್ಳಲು ಜನಸಂಗ್ರಾಮ ಪರಿಷತ್(ಜೆಎಸ್‌ಪಿ) ಎನ್‌ಸಿಪಿಎನ್‌ಆರ್ ಮತ್ತು ಸಮಾಜ ಪರಿವರ್ತನಾ ಸಮುದಾಯದ ಸಹಯೋಗದಲ್ಲಿ ಅ.12ರಂದು ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ರಾಜ್ಯ ಮಟ್ಟದ ಚಿಂತನಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಲೋಕಾಯುಕ್ತರ ವರದಿ ಜಾರಿಗೆ ತನ್ನಿ: ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಕುರಿತು ನೀಡಿರುವ ಎರಡೂ ವರದಿಯನ್ನು ರಾಜ್ಯ ಸರ್ಕಾರವು ಜಾರಿಗೆ ತರಬೇಕು. ಸರ್ಕಾರಿ ಜಮೀನನ್ನು ಅತಿಕ್ರಮಿಸಿ ಭೂ ಕಬಳಿಕೆಯಲ್ಲಿ ಪಾಲುದಾರರಾಗಿರುವ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಬುಜಂಗನಗರ ಗ್ರಾಮದಲ್ಲಿ ಚೆಕ್ ಡ್ಯಾಂ ಒಡೆದ ಪರಿಣಾಮ ಆದ ಬೆಳೆಹಾನಿ, ಇತರೆ ನಷ್ಟಗಳ ಬಗ್ಗೆ ಪರಿಶೀಲಿಸಿ ನೀಡಿರುವ ವರದಿಯಂತೆ ರು. 1.24 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು
ಲಾಡ್ ರಾಜಿನಾಮೆ ನೀಡಲಿ: ಕಲಘಟಗಿ ಶಾಸಕ, ರಾಜ್ಯ ವಾರ್ತಾ ಸಚಿವ ಸಂತೋಷ್ ಲಾಡ್ ಗಣಿ ಅಕ್ರಮದಲ್ಲಿ ಭಾಗಿಯಾಗಿರುವುದಂತೂ ನಿಜ. ಈ ಬಗ್ಗೆ ಈಗಾಗಲೇ ದಾಖಲೆಗಳ ಮೂಲಕ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾವೇ ಅರಿತು ತಮ್ಮ ಜವಾಬ್ದಾರಿಯುತ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದರು.
ರೈತಪರ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಟಿ.ಎಂ. ಶಿವಕುಮಾರ್, ಬುಜಂಗನಗರದ ಶಂಕ್ರಪ್ಪ, ಶ್ರೀಶೈಲ, ಈರಣ್ಣ ಸೇರಿದಂತೆ ಇತರರು ಇದ್ದರು.