ಆರು ವರ್ಷಗಳಾದರೂ ಮೃತನ ಕುಟುಂಬಕ್ಕೆ ಸಿಕ್ಕಿಲ್ಲ ಪರಿಹಾರ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಸೆ. 22
ಏಳು ವರ್ಷದ ಮಗ ನೀರಿನ ಗುಂಡಿಗೆ ಕಾಲುಜಾರಿ ಬಿದ್ದು ಸಾವಿಗೀಡಾಗಿ ಆರು ವರ್ಷ ಗತಿಸಿದರೂ ಮೃತ ಬಾಲಕನ ಕುಟುಂಬದವರು ಹತ್ತು ಹಲವು ಕಚೇರಿಗಳಿಗೆ ಅಲೆದಾಡಿದರೂ ಯಾವುದೇ ಪರಿಹಾರ ದೊರಕಿಲ್ಲ.
ತಾಲೂಕಿನ ಕುರಿಹಟ್ಟಿ ಗ್ರಾಮದ ನಿಂಗಮ್ಮ, ಕಿತ್ತೂರು ಓಬಯ್ಯ ದಂಪತಿಗಳ ಮಗನಾದ ಏಳು ವರ್ಷದ ಓಬಳೇಶ ಎಂಬ ಬಾಲಕ ಕುರಿಹಟ್ಟಿಯಲ್ಲಿ 2ನೇ ತರಗತಿ ಓದುತ್ತಿದ್ದನು. ತನ್ನ ಅಕ್ಕನ ಊರಾದ ಮಾಕನಡಕು ಗ್ರಾಮಕ್ಕೆ ಹೋಗಿದ್ದಾಗ, ಅಲ್ಲಿ ಗೆಳೆಯರ ಜತೆ ಆಟವಾಡುತ್ತಾ ಗ್ರಾಮದ ಪಕ್ಕದಲ್ಲೇ ಇರುವ ಹಳ್ಳದ ಬಳಿ ಹೋಗಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು 2007ರ ಮೇ 8ರಂದು ಸಾವನ್ನಪ್ಪಿದ್ದನು. ಈ ಬಗ್ಗೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ ಶವಪರೀಕ್ಷೆಯನ್ನೂ ನಡೆಸಲಾಗಿದೆ. ವಿದ್ಯಾರ್ಥಿ ಸಾವಿನ ಬಗ್ಗೆ ಮಾಕನಡುಕು ಗ್ರಾಮಸ್ಥರು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮೃತ ಬಾಲಕನ ಪಾಲಕರು ಪರಿಹಾರಕ್ಕಾಗಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಗುಡೇಕೋಟೆ ಹೋಬಳಿ ಕಂದಾಯ ಪರಿವೀಕ್ಷಕರಿಂದ 2007ರ ಅಕ್ಟೋಬರ್ನಲ್ಲಿ ಗ್ರಾಮ ಮಹಜರ್ ಮತ್ತು ಕುಟುಂಬದವರ ಹೇಳಿಕೆ ಪಡೆಯಲಾಗಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಯಾಕೆ ಅಧಿಕಾರಿಗಳು ಅಲೆದಾಡಿಸುತ್ತಾರೆ ಅಂತಾ ತಿಳಿವಲ್ದು, ನಾನು ಕೂಲಿ ಮಾಡಿ ಬಂದ ಹಣವನ್ನೇ ನನ್ನ ಗಂಡನಿಗೆ ಕೊಟ್ಟು ಪರಿಹಾರಕ್ಕಾಗಿ ಪ್ರತಿದಿನವೂ ಹೋರಾಟ ಮಾಡ್ತಿದ್ದೀವಿ, ಆದ್ರೆ ಆ ದೇವ್ರು ಮಾತ್ರ ಇದೂವರೆಗೂ ನಮ್ಮ ಮೇಲೆ ಕರುಣೆ ತೋರಿಸಿಲ್ಲ ಎನ್ನುತ್ತಾಳೆ ಮಗನನ್ನು ಕಳೆದುಕೊಂಡ ತಾಯಿ ಕುರಿಹಟ್ಟಿ ನಿಂಗಮ್ಮ. ಗ್ರಾಮದಲ್ಲಿ ನನಗೆ ಸ್ವಂತ ಜಮೀನಿಲ್ಲ ಸ್ವಾಮಿ, ಕೂಲಿ ಮಾಡಿ ಹೇಗೋ ಬಾಳು ಮಾಡ್ತೀವಿ, ನನ್ನ ಮೂವರು ಮಕ್ಕಳಲ್ಲಿ ಒಬ್ಬ ಮಗ ನೀರಿನಲ್ಲಿ ಬಿದ್ದು ಸತ್ತೋದ, ನಂತ್ರ ಮದುವೆಯಾದ ಕೆಲವು ವರ್ಷಗಳಲ್ಲಿಯೇ ನನ್ನ ಮಗಳು ಸಹ ಸತ್ತಳು. ನನ್ನ ಮಗಳ ಮಗ (ಮೊಮ್ಮಗ) ಈಗ ನಮ್ಮ ಜತೆಯಲ್ಲೇ ಇದ್ದಾನೆ. ಕಡು ಬಡತನದಲ್ಲಿ ಜೀವನ ನಡೆಸುವ ನಮಗೆ ಜೀವನ ನಡೆಸೋದೆ ಕಷ್ಟ ಆಗೈತಿ. ಮಗನ ಸಾವಿಗೆ ಸರ್ಕಾರದ ನೆರವು ಸಿಗುತ್ತದೆಂಬ ಆಸೆ ಇಟ್ಕೊಂಡಿದ್ದೆ, ಆದ್ರೆ ಇನ್ನೂ ನನ್ನ ಆಸೆ ಈಡೇರಿಲ್ಲ. ಕಚೇರಿಗಳಿಗೆ ಅಲೆದು ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ ಎನ್ನುತ್ತಾರೆ ಮಗನನ್ನು ಕಳೆದುಕೊಂಡ ಕುರಿಹಟ್ಟಿಯ ಕಿತ್ತೂರು ಓಬಯ್ಯ.
ಕಡು ಬಡತನದಲ್ಲಿರುವ ಕುರಿಹಟ್ಟಿ ಕಿತ್ತೂರು ಓಬಯ್ಯನ ಕುಟುಂಬದವರು ಕೂಲಿಯಿಂದ ಬಂದ ಹಣದಲ್ಲಿ ಆರು ವರ್ಷಗಳಿಂದಲೂ ಸಾವಿರಾರು ರು. ಖರ್ಚು ಮಾಡಿ ದೂರದ ಬಳ್ಳಾರಿ, ಕೂಡ್ಲಿಗಿ ಕಚೇರಿಗಳಿಗೆ ಪರಿಹಾರಕ್ಕಾಗಿ ಅಲೆಯುವುದರಲ್ಲೇ ಸುಸ್ತಾಗಿದ್ದಾರೆ. ಶಾಲೆಗೆ ಹೋಗುವ ಕಂದನ ಕಳೆದುಕೊಂಡು ದುಃಖ ಹೊತ್ತ ತಂದೆ-ತಾಯಿಗಳಿಗೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ಕೂಡ ತಾತ್ಸಾರದಿಂದ ನೋಡುತ್ತಿರುವುದು ಈ ಕುಟುಂಬಕ್ಕೆ ಮತ್ತಷ್ಟು ಸಂಕಟ ತಂದಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಲಿ, ಪರಿಹಾರ ಕಲ್ಪಿಸುವ ಮೂಲಕ ತಂದೆ-ತಾಯಿಗಳ ನೋವಿನ ಭಾರ ಕಡಿಮೆಗೊಳಿಸಿದರೆ ಈ ಕುಟುಂಬಕ್ಕೆ ನೆಮ್ಮಿದಿಯಾದರೂ ಸಿಕ್ಕಿತು. ಶಿಕ್ಷಣ ಇಲಾಖೆಯಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ನೊಂದ ಕುಟುಂಬಕ್ಕೆ ನೆರವು ನೀಡಬೇಕಾಗಿದೆ.
ಭೀಮಣ್ಣ ಗಜಾಪುರ