ಕಳ್ಳತನ ಮಾಡಿದ ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ
ಕೊಟ್ಟೂರು: ಪಟ್ಟಣದ ವಿವಿಧ ಮನೆಗಳಲ್ಲಿ 3-4 ವರ್ಷಗಳ ಹಿಂದೆ ಕಳ್ಳತನವೆಸಗಿದ್ದ ಆರೋಪಿ ಪೆದ್ದಯ್ಯನಿಗೆ ಕೂಡ್ಲಿಗಿಯ ನ್ಯಾಯಾಲಯ ಮೂರು ವರ್ಷ ಕಠಿಣ ಶಿಕ್ಷೆ, ರು. 5 ಸಾವಿರ ದಂಡ ವಿಧಿಸಿ ಆದೇಶಿಸಿದೆ. ಆರೋಪಿ ಪೆದ್ದಯ್ಯ ಪಟ್ಟಣದಲ್ಲಿ 2008ರಲ್ಲಿ ಡಾ. ವೀರಭದ್ರಯ್ಯ, 2010ರಲ್ಲಿ ಸಾಲಿಬಾಯಿ ಹಾಗೂ ಬಿ.ಡಿ. ಹಾವರ್ಗಿ ಮತ್ತು ಅಶೋಕ್ ಎಂಜಿನಿಯರ್ ಅವರ ಮನೆಗಳ ಬೀಗಮುರಿದು ಬೆಳ್ಳಿ-ಬಂಗಾರದ ಆಭರಣಗಳು, ಮೊಬೈಲ್‌ಗಳನ್ನು ಕಳ್ಳತನವೆಸಗಿ ಪರಾರಿಯಾಗಿದ್ದ ಪ್ರಕರಣ ದಾಖಲಿಸಿಕೊಂಡಿದ್ದ ಕೊಟ್ಟೂರಿನ ಆಗಿನ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಡಿ. ಬಿರಾದಾರ್ ಪಾಟೀಲ್ ನೇತೃತ್ವದ ಪೊಲೀಸ್ ತಂಡ ಈತನಿದ್ದ ಜಗಲೂರು ತಾಲೂಕಿನ ಸಿದ್ದಯ್ಯನಕೋಟೆ ಗ್ರಾಮಕ್ಕೆ ತೆರಳಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಪೆದ್ದಯ್ಯನ ವಿರುದ್ಧ ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎಸ್.ಡಿ. ಕಮತೆ ವಾದಮಂಡಿಸಿದ್ದರು. ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಎಸ್. ಹೊನ್ನಸ್ವಾಮಿ ಆರೋಪಿ ಪೆದ್ದಯ್ಯನಿಗೆ ಮೂರು ವರ್ಷ ಕಠಿಣ ಶಿಕ್ಷೆ, ರು. 5 ಸಾವಿರ ದಂಡ ವಿಧಿಸಿದರಲ್ಲದೆ, ದಂಡದ ಹಣ ರು. 5 ಸಾವಿರ ಆರೋಪಿ ಕಟ್ಟದೇ ಹೋದಲ್ಲಿ ಮತ್ತೆ ಶಿಕ್ಷೆಯನ್ನು ಆರು ತಿಂಗಳವರೆಗೆ ಮುಂದುವರೆಸಲು ಆದೇಶಿಸಿದ್ದಾರೆ ಎಂದು ಸಿಪಿಐ ವಿ.ಎಚ್. ವಿಜಯಕುಮಾರ ತಿಳಿಸಿದರು.