ಮಹಿಳೆಯರಿಗೆ ಕೈಗಾರಿಕೆ ಪರಿಕರ ಉಚಿತ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 22
ಸ್ವಯಂ ಉದ್ಯೋಗ ಆರಂಭಿಸುವ ಮಹಿಳೆಯರಿಗೆ ಜಿಲ್ಲಾ ಪಂಚಾಯಿತಿಯಿಂದ ಕೈಗಾರಿಕೆ ಪರಿಕರಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಜಿಪಂ ಸದಸ್ಯ ಅನ್ನದಾನರೆಡ್ಡಿ ಹೇಳಿದರು.
ತಾಲೂಕಿನಿ ಭುವನಹಳ್ಳಿ ಗ್ರಾಮದಲ್ಲಿ ಕೂಡ್ಲಗಿಯ ಸುರಭಿ ಸಮಗ್ರ ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆಯವರು ಕೃಷಿಕ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಏಳು ದಿನಗಳ ಮೇಣದ ಹಾಗೂ ಅಗರಬತ್ತಿ ತರಬೇತಿಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರ ಹಾಗೂ ಕೈಪಿಡಿ ವಿತರಿಸಿ ಅವರು ಮಾತನಾಡಿದರು.
ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಮನೆಯಲ್ಲಿಯೇ ಇದ್ದುಕೊಂಡು ಅನೇಕ ದಿನ ಬಳಕೆಯ ವಸ್ತುಗಳ ತಯಾರಿಕೆಯಲ್ಲಿ ತೊಡಗಿಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಮುಂದಾಗಬೇಕು. ಜಲಾನಯನ ಇಲಾಖೆಯ ಯೋಜನೆಗಳು ಈ ಹಿಂದೆ ಸಮರ್ಪಕವಾಗಿ ಜಾರಿಯಾಗುತ್ತಿರಲ್ಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ನಿರುದ್ಯೋಗ ಗ್ರಾಮಸ್ಥರ ಆರ್ಥಿಕ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಾಗುತ್ತಿದೆ. ಈ ನಿಟ್ಟನಲ್ಲಿ ಕೂಡ್ಲಗಿಯ ಸುರಭಿ ಸಮಗ್ರ ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಸರ್ಕಾರ ಯೋಜನೆಗಳನ್ನು ಗ್ರಾಮದ ಕೃಷಿ ಮಹಿಳೆಯರಿಗೆ ಮನೆ ಬಾಗಿಲಿಗೆ ತಲುಪಿಸುವಂತ ಕಾರ್ಯವನ್ನು ಜಲಾನಯನ ಇಲಾಖೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಕೂಡ್ಲಗಿಯ ಸುರಭಿ ಸಮಗ್ರ ಮಾನವ ಕಲ್ಯಾಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಜಿ. ಉಮೇಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕಾಭಿವೃದ್ಧಿ ಹೊಂದಲು ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾಗಬೇಕು ಎಂದರು.
ತಾಲೂಕು ಜಲಾನಯನ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನಗೌಡ, ಸ್ಥಳೀಯ ಗುತ್ತಿಗೆದಾರ ಮಲ್ಲಿಕಾರ್ಜುನ, ಹನುಮಂತರೆಡ್ಡಿ, ಜಿಲ್ಲಾ ತರಬೇತಿ ಸಂಯೋಜಕ ಉಮೇಶ್ ನಾಗಣ್ಣನವರ್ ಇದ್ದರು. ರವಿಶಂಕರ್ ಸ್ವಾಗತಿಸಿ, ನಿರೂಪಿಸಿದರು. ಗೀತಾ ವಂದಿಸಿದರು.