ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದೌರ್ಜನ್ಯ: ಸಚಿವರ ಮನೆ ಮುಂದೆ ಸತ್ಯಾಗ್ರಹ

Lingaraj Badiger
Updated On : 24 Sept 2013, 11:03 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 23
ತಾಲೂಕಿನ ಅಂಗವಿಕಲ ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹಾಗೂ ವಾಸ್ತವತೆ ಕುರಿತು ಸಚಿವರು ಚರ್ಚೆ ಮಾಡದಿದ್ದರೆ ಕಾರ್ಮಿಕರ ಸಚಿವರ ಮನೆ ಮುಂದೆ ಅ. 7ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆಂದು ತಾಲೂಕು ಅಂಗವಿಕಲ ಸಂಘದ ಅಧ್ಯಕ್ಷ ತಳಕಲ್ಲು ಚಂದ್ರಪ್ಪ, ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್. ಮಂಜುಳಾ ಹಾಗೂ ಎಐಟಿಯುಸಿ ತಾಲೂಕು ಸಂಚಾಲಕ ಮತ್ತಿಹಳ್ಳಿ ಬಸವರಾಜ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಿರೇಕೊಳಚಿ ಗ್ರಾಮದ ಅಂಗವಿಕಲ ಅಂಗನವಾಡಿ ಕಾರ್ಯಕರ್ತೆ ಎ. ಸಾವಿತ್ರಮ್ಮ ವಿರುದ್ಧ ಸ್ಥಳೀಯರ ಸುಳ್ಳು ಆಪಾದನೆ ಮೇರೆಗೆ ಅವರನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆಂದು ಹೇಳಿದರು.
ಸ್ಥಳೀಯ ಮುಖಂಡರ ಸ್ವಹಿತಾಸಕ್ತಿಗೆ ಸಾವಿತ್ರಮ್ಮನ ಮೇಲೆ ಇಲ್ಲ ಸಲ್ಲದ ಅಪಾದನೆ ಮಾಡಿ ಕೇಂದ್ರದ ಕಾರ್ಯಕರ್ತೆಯನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಈ ಕುರಿತು ಅನೇಕ ಬಾರಿ ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕರಿಗೆ ಮನವಿ ಸಲ್ಲಿಸಿದಾಗ ಅಲ್ಲಿಯ ಸ್ಥಳೀಯ ನಾಯಕರನ್ನು ಕೇಳಿ ಕ್ರಮ ಕೈಗೊಳ್ಳುತ್ತೇನೆಂದು ಹೇಳುವ ಸಚಿವರ ಮಾತು ಸರಿಯಲ್ಲ. ಈ ವರೆಗೂ ಚರ್ಚೆ ಮಾಡಲು ಸಂಘಟನೆಯ ಮುಖಂಡರನ್ನು ಕರೆದಿಲ್ಲ ಎಂದು ದೂರಿದರು.
6 ತಿಂಗಳಿನಿಂದ ಸಮಸ್ಯೆ ಜೀವಂತ: ಹಿರೇಕೊಳಚಿ ಗ್ರಾಮದ ಪ್ರಭಾವಿಗಳ ಮನೆ ಮುಂದೆ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿಯ ವರದಿ ಆಧಾರದ ಮೇಲೆ ಸಿಡಿಪಿಒ ಮೇಲಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ವರದಿ ನೀಡಿದ್ದು, ಆದರೆ ತನಿಖೆ ಮತ್ತು ವಾಸ್ತವತೆ ಅರಿಯದೇ ಒಬ್ಬ ಅಂಗವಿಕಲ ಅಂಗನವಾಡಿ ಕಾರ್ಯಕರ್ತೆ ವಜಾ ಮಾಡಿರುವ ಕ್ರಮ ಸರಿಯಲ್ಲ. 6 ತಿಂಗಳಿನಿಂದ ಸಮಸ್ಯೆಯನ್ನು ಬಗೆಹರಿಸದೇ ಸಚಿವರು ಜೀವಂತ ಇಟ್ಟಿದ್ದಾರೆಂದು ದೂರಿದರು.
ಬೇರೊಬ್ಬರನ್ನು ನೇಮಿಸಲು ರು. 40 ಸಾವಿರ: ಸಿಪಿಡಿಒ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಾರ್ಯಕರ್ತೆಯಿಂದ ತಪ್ಪೊಪ್ಪಿಗೆ ಪತ್ರವನ್ನು ಬಲವಂತವಾಗಿ ಬರೆಸಿಕೊಂಡಿರುವ ಹಿಂದಿರುವ ಕಾರಣ ನಿಮಗೆ ಮತ್ತೆ ನೌಕರಿ ನೀಡುತ್ತೇವೆಂದು ಸುಳ್ಳು ಹೇಳಿದ್ದಾರೆ. ಇದರ ಹಿಂದೆ ಸ್ಥಳೀಯ ಪ್ರಭಾವಿ ಮುಖಂಡರ ಕೈವಾಡವಿದೆ. ಬೇರೊಬ್ಬರನ್ನು ನೇಮಿಸಲು ಕೇಂದ್ರಗಳ ಮೇಲ್ವಿಚಾರಕಿಯೊಬ್ಬರು ರು. 40 ಸಾವಿರ ಪಡೆದಿದ್ದಾರೆಂದು ಗಂಭೀರವಾಗಿ ಆರೋಪಿಸಿದ್ದಾರೆ.
ಉಗ್ರ ಹೋರಾಟ: ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಪರ ಕೆಲಸ ಮಾಡಿಲ್ಲವೆಂಬ ಕಾರಣಕ್ಕಾಗಿ ತಾಲೂಕಿನ ಅನೇಕ ಹಳ್ಳಿಗಳ ಸ್ಥಳೀಯ ಮುಖಂಡರು ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಸಚಿವರ ಮುಂದೆ ಸುಳ್ಳು ಆಪಾದನೆ ಮಾಡಿ ಅವರನ್ನು ಬೇರೆಡೆ ವರ್ಗಾವಣೆ ಮತ್ತು ವಜಾ ಮಾಡುವ ಪ್ರಕ್ರಿಯೆಯನ್ನು ಸಚಿವರು ಕೈ ಬಿಡಬೇಕು. ತಾಲೂಕಿನ ಅಂಗವಿಕಲ ಮೇಲಿನೆ ದೌರ್ಜನ್ಯ ದಬ್ಬಾಳಿಕೆಗಳು ಇದೇ ರೀತಿ ಮುಂದುವರಿದರೇ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಮಟ್ಟದಲ್ಲಿ ಸಲಕರಣೆ ನೀಡಿ: ಕಾರ್ಮಿಕ ಸಚಿವರಿಗೆ ಕಾರ್ಮಿಕರ ಬವಣೆಯನ್ನು ಅರಿಯದೇ ತಮ್ಮ ಕಾರ್ಯಕರ್ತರ ಬೆಂಬಲಕ್ಕೆ ನಿಂತಿದ್ದಾರೆ. ಯಾವ ಇಲಾಖೆಗಳಲ್ಲಿಯೂ ಶೇ. 3ರಷ್ಟು ಅನುದಾನವನ್ನು ಅಂಗವಿಕಲರಿಗೆ ಮೀಸಲಿಡದೇ ಕಾನೂನುಗಳನ್ನು ಗಾಳಿ ತೋರಿದ್ದಾರೆ. ಅಂಗವಿಕಲರಿಗೆ ನೀಡುವ ಟ್ರೈಸಿಕಲ್‌ನ್ನು ಜಿಲ್ಲಾ ಕೇಂದ್ರದಿಂದ ಫಲಾನುಭವಿಯೇ ತರಬೇಕೆಂದು ಹೇಳುತ್ತಾರೆ. ಆದರೆ, ಬಳ್ಳಾರಿಯಿಂದ ತರಲು ರು. 3 ಸಾವಿರ ವ್ಯಯವಾಗುತ್ತದೆ. ಆದೇ ರು. 3 ಸಾವಿರಗಳಲ್ಲೇ ಟ್ರೈಸಿಕಲ್‌ನ್ನು ಕೊಳ್ಳಬಹುದು. ಆದ್ದರಿಂದ ಅಧಿಕಾರಿಗಳೇ ತಾಲೂಕು ಮಟ್ಟದಲ್ಲಿ ಅಂಗವಿಕಲರ ಸಲಕರಣೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಫೆಡರೇಷನ್ ಕಾರ್ಯದರ್ಶಿ ಕಮಲಾಕ್ಷಿ, ಕಾರ್ಯಕರ್ತೆ ಸಾವಿತ್ರಮ್ಮ, ಸೋಮಪ್ಪ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement