ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಾಳೆ ಅತಿಥಿ ಉಪನ್ಯಾಸಕರ ಒಕ್ಕೂಟ ಪ್ರತಿಭಟನೆ

Lingaraj Badiger
Updated On : 24 Sept 2013, 11:12 am

ಬಳ್ಳಾರಿ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಘಟನೆ ಹಾಗೂ ಅತಿಥಿ ಉಪನ್ಯಾಸಕರ ಒಕ್ಕೂಟದ ಸಹಯೋಗದಲ್ಲಿ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ. 25ರಂದು  ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಡಾ. ಟಿ. ದುರುಗಪ್ಪ ಹೇಳಿದರು. ನಗರದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಕ್ಕೂಟದ ರಾಜ್ಯ ಘಟಕದ ಕರೆಯ ಮೇರೆಗೆ ಎಲ್ಲ ಜಿಲ್ಲೆಗಳ ಡಿಸಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದ ಅವರು, ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಸುಮಾರು 10600 ಅತಿಥಿ ಉಪನ್ಯಾಸಕರಿದ್ದು, ಜಿಲ್ಲೆಯಲ್ಲಿ 360 ಅತಿಥಿ ಉಪನ್ಯಾಸಕರಿದ್ದಾರೆ. ಇವರಿಗೆ ಸೇವಾ ಭದ್ರತೆಯಿಲ್ಲದೆ ಆತಂಕಕ್ಕೀಡು ಮಾಡಿದೆ. ವರ್ಷವಿಡೀ ಮಾಡಿದ ಕೆಲಸಕ್ಕೆ ಮತ್ತೊಂದು ವರ್ಷ ವೇತನ ಪಾವತಿಯಾಗುತ್ತಿದೆ. ಸದ್ಯ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ ಎಂದು ತಿಳಿಸಿದರು. 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೂ ಹಾಗೂ ಈಗ ಸ್ನಾತಕೋತ್ತರ ವ್ಯಾಸಂಗ ಮುಗಿಸಿರುವ ವಿದ್ಯಾರ್ಥಿಗಳ ಫಲಿತಾಂಶಗಳಿಗೆ ಸಾಕಷ್ಟು ವ್ಯತ್ಯಾಸಗಳಿವೆ. ಈ ಮೊದಲು ಸ್ನಾತಕೋತ್ತರ ಪದವಿಯಲ್ಲಿ ಶೇ. 60ರಷ್ಟು ಅಂಕಗಳಿಸುವುದೇ ಕಷ್ಟಕರವೆನಿಸುತ್ತಿತ್ತು. ಆದರೆ, ಸದ್ಯ ಪಿಜಿ ಮುಗಿಸಿರುವ ವಿದ್ಯಾರ್ಥಿಗಳ ಫಲಿತಾಂಶ ಶೇ.70-75ಕ್ಕೂ ಅಧಿಕವಾಗಿದೆ. ಹೀಗಾಗಿ ನೇಮಕಾತಿಯಲ್ಲಿ ವಯೋವುತಿ ಆಧಾರದ ಮೇಲೆ 5 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವವರಿಗೆ ಕೃಪಾಂಕ ನೀಡಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು. ಪ್ರಸಕ್ತ ಸಾಲಿನಿಂದ ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡ ಸರ್ಕಾರ ಕೇವಲ ಸ್ನಾತಕೋತ್ತರ ಪದವಿಗೆ ರು. 8 ಸಾವಿರ, ಎಂಫಿಲ್, ಪಿಎಚ್‌ಡಿ ಪದವೀಧರರಿಗೆ ರು. 10 ಸಾವಿರ ವೇತನ ನೀಡುತ್ತಿದೆ. ಈ ಕಡಿಮೆ ವೇತನ ಯಾವುದಕ್ಕೂ ಸಾಲದೆ, ನಿತ್ಯ ಸಂಕಷ್ಟ ಪರಿಸ್ಥಿತಿ ಅನುಭವಿಸುವಂತಾಗಿದೆ. ಹೀಗಾಗಿ ಕೇರಳ, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ನೀಡುವಂತೆ ಕೇಂದ್ರ ಹಣಕಾಸು ಆಯೋಗದ ನಿಯಮಗಳಂತೆ ರು. 20-25 ಸಾವಿರ ವೇತನ ನೀಡಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಉಪಾಧ್ಯಕ್ಷ ಡಾ. ಎಚ್.ಕುಮಾರಸ್ವಾಮಿ, ಕಾರ್ಯದರ್ಶಿ ಡಾ. ಡಿ.ಸಿದ್ದೇಶ್, ಸಹಕಾರ್ಯದರ್ಶಿ ಡಾ. ಟಿ.ರುದ್ರಮುನಿ, ಜೆ.ಎಚ್.ಹನುಮೇಶ್, ರಫೀಕ್, ಬಿ.ನಾಗಭೂಷಣ, ಜಯರಾಮ್ ಮತ್ತಿತರರು ಇದ್ದರು.
ಹೂವಿನಹಡಗಲಿ ವರದಿ: ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಒಕ್ಕೂಟ ಹಾಗೂ ಡಿವೈಎಫ್‌ಐ ಸಹಯೋಗದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸೆ.25 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ಮಾಡಲಾಗುವುದು ಎಂದು ತಾಲೂಕ ಅಧ್ಯಕ್ಷ ಜಿ.ಹಾಲೇಶ ತಿಳಿಸಿದ್ದಾರೆ. ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, 25ರಂದು ಒಂದು ದಿನ ತರಗತಿ ಬಹಿಷ್ಕಾರ ಮಾಡಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement