27ರಂದು ಗ್ರಾಪಂ ಸಭೆ
ಬಳ್ಳಾರಿ: ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಗ್ರಾಮ ಪಂಚಾಯಿತಿ ಸಭೆಯು ಸೆ. 27ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಗ್ರಾಪಂ ಕಾರ್ಯದರ್ಶಿಗಳು ತಿಳಿಸಿದ್ದಾರೆ. ಅಂದು ನಡೆಯುವ ಗ್ರಾಪಂ ಸಭೆಯಲ್ಲಿ ಎಲ್ಲ ಸದಸ್ಯರು ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಪತಿಯಿಂದ ಪತ್ನಿ ಕೊಲೆ
ಬಳ್ಳಾರಿ: ಮಹಿಳೆಯೋರ್ವಳನ್ನು ಆಕೆಯ ಪತಿಯೇ ಕೊಡಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮಧುಮಾಲಿನಿ (31) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಗ್ರಾಮದವಳಾಗಿದ್ದು, ಕಳೆದ 10 ವರ್ಷಗಳ ಹಿಂದೆ ಮಧುಮಾಲಿನಿಯನ್ನು ಉಪ್ಪಾರ ಹೊಸಳ್ಳಿಯ ಬಸವರಾಜ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಕಳೆದ ನಾಲ್ಕೈದು ವರ್ಷಗಳಿಂದ ಬಸವರಾಜ ತನ್ನ ಪತ್ನಿ ಮಧುಮಾಲಿನಿಯನ್ನು ಅನುಮಾನಿಸಿ, ವಿನಾಕಾರಣ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದನು. ಸೆ. 23ರಂದು ಬೆಳಗ್ಗೆ ಬಸವರಾಜ್ ಹೆಂಡತಿಯನ್ನು ಕೊಡಲಿಯಿಂದ ಮುಂಗೈ, ಕಿವಿ, ಕುತ್ತಿಗೆಗೆ ಹೊಡೆದಿದ್ದಾನೆ ಇದರಿಂದ ತೀವ್ರವಾಗಿ ಗಾಯಗೊಂಡ ಮಧುಮಾಲಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.