ತುಂಗಭದ್ರಾ ಜಲಾಶಯ ಹೂಳು ತೆಗೆಸಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 24
ರಾಜ್ಯ ಸರ್ಕಾರ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳನ್ನು ತೆಗೆಸಬೇಕು. ಇದು ಸಾಧ್ಯವಾಗದಿದ್ದಲ್ಲಿ ಡ್ಯಾಂನಿಂದ ಹರಿದು ಹೋಗುವ ನೀರಿನ ಸದ್ಬಳಕೆಗಾಗಿ, ನೀರು ಸಂಗ್ರಹಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲೀಪಾಟೀಲ ಒತ್ತಾಯಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಲಾಶಯದಲ್ಲಿನ ಹೂಳನ್ನು ತೆಗೆಸಲು ಸ್ಪಷ್ಟ ನಿಲುವು ತಾಳುತ್ತಿಲ್ಲ. ಡ್ಯಾಂನಿಂದ ಹರಿದು ಹೋಗುವ ನೀರಿನ ಸದ್ಬಳಕೆಗಾಗಿ, ನೀರು ಸಂಗ್ರಹಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರ ಕಾಲ ಮುಂದೂಡುವ ಕೆಲಸ ಮಾಡಬಾರದು ಎಂದರು.
ವರದಿ ಜಾರಿಯಾಗಲಿ: ಬರಡು ಪ್ರದೇಶದ ಅಭಿವೃದ್ಧಿಗಾಗಿ ಪರಮಶಿವಯ್ಯ ವರದಿಯನ್ನು ಕಾಲಮಿತಿಯೊಳಗಡೆ ಜಾರಿಗೆ ತರಬೇಕು. ಉತ್ತರ ಕರ್ನಾಟಕದ ಖುಷ್ಕಿ ಭೂಮಿ ಅಭಿವೃದ್ಧಿಗಾಗಿ ಕೃಷ್ಣಾ ಮೇಲ್ದಂಡೆ ಯೋಜನೆಯ ಎ ಸ್ಕೀಂ ನೀರನ್ನು ತ್ವರಿತಗತಿಯಲ್ಲಿ ಬಳಸಿಕೊಳ್ಳಬೇಕು. ಬಿ ಸ್ಕೀಂ ನೀರನ್ನು ಕಾಲಮಿತಿಯೊಳಗೆ ಸದುಪಯೋಗ ಪಡಿಸಿಕೊಳ್ಳಲು ನೀಲಿ ನಕಾಶೆ ತಯಾರಿಸಬೇಕು ಹಾಗೂ ಸಿಂಗಟಾಲೂರು ಏತನೀರಾವರಿಯಿಂದ ಭೂಮಿ ಕಳೆದುಕೊಂಡ ರೈತರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಸಂಡೂರು ತಾಲೂಕಿನ ಭುಜಂಗನಗರ ಗ್ರಾಮದಲ್ಲಿ ಎನ್‌ಎಂಡಿಸಿಗೆ ಸೇರಿದ ಚೆಕ್‌ಡ್ಯಾಂ ಒಡೆದ ಪರಿಣಾಮ ರೈತರಿಗೆ ಆಗಿರುವ ಬೆಳೆ ಮತ್ತು ಭೂಮಿ ನಷ್ಟಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವತಿಯಿಂದ ಪರಿಶೀಲಿಸಿ ವರದಿ ನೀಡಿದ್ದು, ಅದರಲ್ಲಿ ರು. 1.24 ಕೋಟಿ ರೈತರಿಗೆ ಪರಿಹಾರ ಧನ ನೀಡಬೇಕಾಗಿತ್ತು. ಆದರೆ ಇದುವರೆಗೂ ಹಣ ಪಾವತಿ ಮಾಡಿಲ್ಲ. ಈ ಕುರಿತು ಚರ್ಚಿಸಿ, ದೊಡ್ಡ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಚಳುವಳಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ರೈತರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ರಾಜ್ಯ ಘಟಕದ ಪದಾಧಿಕಾರಿಗಳನ್ನು 4 ತಂಡಗಳನ್ನಾಗಿ ರಚಿಸಿ, ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ರೈತರ ಸಮಸ್ಯೆಗಳು ಹಾಗೂ ಇತರೆ ಮಾಹಿತಿಯನ್ನು ಸಂಗ್ರಹಿಸಿ, ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
ಅ.28ರಂದು ಸಮಾವೇಶ: ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ವಿದೇಶಿ ಕೃಷಿ ಉತ್ಪನ್ನಗಳ ಆಮದು ತಡೆಯಲು, ರಾಜ್ಯದ ಬರಡು ಪ್ರದೇಶಗಳನ್ನು ಸಮಗ್ರ ಅಭಿವೃದ್ಧಿಪಡಿಸಲು ಹಾಗೂ ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರ ಬೃಹತ್ ಸಮಾವೇಶವನ್ನು ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಜೆ.ಎಂ. ವೀರಸಂಗಯ್ಯ, ಸಂಘದ ಜಿಲ್ಲಾಧ್ಯಕ್ಷ ರಾಜಶೇಖರಗೌಡ, ರೈತ ಮುಖಂಡ ದರೂರು ಪುರುಷೋತ್ತಮಗೌಡ, ಶಾಂತನಗೌಡ ಸೇರಿದಂತೆ ಇತರರು ಇದ್ದರು.