ಯಶಸ್ವಿ ರೈತರ ಜಾತ್ರೆಗೆ ತೆರೆ
ಕನ್ನಡಪ್ರಭ ವಾರ್ತೆ, ಧಾರವಾಡ, ಸೆ. 24
ತಿಂಗಳಾನುಗಟ್ಟಲೇ ಸಕಲ ಸಿದ್ಧತೆಯೊಂದಿಗೆ ಕಳೆದ ಶನಿವಾರದಿಂದ ಆರಂಭವಾಗಿದ್ದ ನಾಲ್ಕು ದಿನಗಳ ರೈತರ ಜಾತ್ರೆ ಯಶಸ್ವಿಯಾಗಿ ಮಂಗಳವಾರ ತೆರೆ ಕಂಡಿದೆ.
ಆಹಾರ ಭದ್ರತೆಗಾಗಿ ಜಲ ಸಂರಕ್ಷಣೆ ಎಂಬ ಪ್ರಮುಖ ಉದ್ದೇಶದೊಂದಿಗೆ ನಡೆದ ಕೃಷಿ ಮೇಳ, ಲಕ್ಷಾಂತರ ರೈತರನ್ನು, ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ತಲುಪಿದೆ ಎನ್ನುವುದರಲ್ಲಿ ಅತಿಶಯೋಕ್ತಿಯೇನಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ಈ ಕೃಷಿ ಮೇಳ ನಾಲ್ಕೂ ದಿನ ರೈತರ ಹಬ್ಬವಾಗಿ ಪರಿಣಮಿಸಿತು. ಕೃಷಿ ವಿವಿ ವ್ಯಾಪ್ತಿಯ ಜಿಲ್ಲೆಗಳ ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆಯರಿಗೆ ಮಾತ್ರ ಇಷ್ಟೂ ಮೇಳಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿತ್ತು. ಪ್ರಪ್ರಥಮವಾಗಿ ತಾಲೂಕು ಮಟ್ಟಕ್ಕೆ ವಿಸ್ತರಿಸಿ ಕೃಷಿಯಲ್ಲಿ ಯುವಕರನ್ನು ಉತ್ತೇಜಿಸಲು ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಪ್ರತಿ ತಾಲೂಕಿಗೂ ಇಬ್ಬರಂತೆ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.
ಮೇಳ ನಾಲ್ಕೂ ದಿನ ಸಮಗ್ರ ಕೃಷಿ ಪದ್ಧತಿ ಹಾಗೂ ಬೆಳೆ ವೈವಿಧ್ಯತೆ, ತೋಟಗಾರಿಕೆ ಬೆಳೆಗಳ ತಾಂತ್ರಿಕತೆಗಳು ಮತ್ತು ಆಹಾರ ಧಾನ್ಯಗಳ ಮೌಲ್ಯವರ್ಧನೆ, ಮಣ್ಣು ಮತ್ತು ನೀರ ಸಂರಕ್ಷಣೆ, ಕೃಷಿ ಯಂತ್ರೋಪಕರಣಗಳು ಮತ್ತು ಉಪಕಸಬುಗಳು ವಿಷಯ ಕುರಿತು ರೈತರಿಗೆ ತಿಳಿವಳಿಕೆ ನೀಡಲಾಯಿತು. ರೈತರಿಂದ ರೈತರಿಗಾಗಿ ಕಾರ್ಯಕ್ರಮದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದ ರೈತರಿಂದ ರೈತರಿಗೆ ಮಾಹಿತಿ ಒದಗಿಸಲಾಯಿತು.
75 ಲಕ್ಷ ವೆಚ್ಚ: ಈ ಬಾರಿಯ ಕೃಷಿ ಮೇಳ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ. ನಾಲ್ಕೂ ದಿನಗಳಲ್ಲಿ ಒಟ್ಟಾರೆ 11 ಲಕ್ಷ ಜನತೆ ಮೇಳದ ಲಾಭ ಪಡೆದಿದ್ದಾರೆ. 1200 ಕ್ವಿಂಟಲ್ ಹಿಂಗಾರಿ ಬಿತ್ತನೆ ಬೀಜಗಳನ್ನು ರೈತರು ಖರೀದಿಸಿದ್ದಾರೆ. 560 ಮಳಿಗೆಗಳಲ್ಲಿ ಕೃಷಿ ವಸ್ತು ಪ್ರದರ್ಶನಗಳು ನಡೆದಿದ್ದು, ಬಯಲು ಮಳಿಗೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಸಹ ರೈತರಿಗೆ ಪರಿಚಯಿಸಲಾಗಿದೆ. ಫಲಪುಷ್ಪ ಪ್ರದರ್ಶನ, ಸಾವಯವ ಕೃಷಿ ಪ್ರದರ್ಶನ, ಕೃಷಿ ಪರಿಕರಗಳ ಮಾರಾಟ, ಜಾಗತಿಕ ಮಾರುಕಟ್ಟೆ ಮತ್ತು ರಫ್ತುಉದ್ಯಮ, ಜಾನುವಾರು, ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆದಿವೆ. ಈ ಬಾರಿ ಎಕರೆಗೆ ನೂರು ಟನ್ ಕಬ್ಬು ಬೆಳೆದ ರೈತರಿಂದ ರೈತರಿಗೆ ಮಾಹಿತಿ ಒದಗಿಸುವ ವಿಚಾರ ಗೋಷ್ಠಿಯಂತೂ 800 ಜನ ಕಬ್ಬು ಬೆಳೆಗಾರರಿಗೆ ಅನುಕೂಲವಾಯಿತು. ಕುಲಪತಿಯಿಂದ ಹಿಡಿದು ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಸಿಬ್ಬಂದಿ ವ್ಯವಸ್ಥಿತವಾಗಿ ಲಕ್ಷಾಂತರ ಜನರನ್ನು ನಿರ್ವಹಿಸಲಾಯಿತು. ಒಟ್ಟು ರು. 75 ಲಕ್ಷ ವೆಚ್ಚವಾಗಿದ್ದು, ಸರ್ಕಾರ ಅಥವಾ ವಿವಿಯಿಂದ ಒಂದು ರುಪಾಯಿ ಸಹ ಹಣ ಪಡೆಯದೆ ಮಳಿಗೆ ಹಾಕಿದ ವಿವಿಧ ಕಂಪನಿ, ಸಂಘ-ಸಂಸ್ಥೆಗಳಿಂದ ಬಂದ ಹಣವನ್ನೇ ಮೇಳಕ್ಕೆ ಬಳಸಿಕೊಳ್ಳಲಾಗಿದೆ ಎಂದು ಮೇಳದ ಯಶಸ್ವಿ ಕುರಿತು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಲ್. ಕೃಷ್ಣಾ ನಾಯಕ ಕನ್ನಡಪ್ರಭದೊಂದಿಗೆ ಮಾತನಾಡಿದರು.
ಮೇಳದ ಕೊನೆ ದಿನ ಮಂಗಳವಾರ ಬೆಳಗ್ಗೆ ಬಿಜಾಪುರ, ಬಾಗಲಕೋಟೆ ಮತ್ತು ಹಾವೇರಿ ಜಿಲ್ಲೆಯ ತಾಲೂಕು ಶ್ರೇಷ್ಠ ಯುವ ಕೃಷಿಕ ಹಾಗೂ ಶ್ರೇಷ್ಠ ಯುವ ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ನಡೆಯಿತು. ಅಲ್ಲದೇ, ರೈತರು ತಮ್ಮ ಸಾಧನೆಗಳನ್ನು ಇನ್ನುಳಿದ ರೈತರಿಗೆ ತಿಳಿಸಿದರು. ಉಪ್ಪಿನ ಬೆಟಗೇರಿಯ ವಿರೂಪಾಕ್ಷ ಮಹಾಸ್ವಾಮಿಗಳುಗಳು ಸಾನ್ನಿಧ್ಯ ವಹಿಸಿ, ಕೃಷಿ ಮೇಳ ಬರೀ ರಾಜ್ಯದ ರೈತರಿಗೆ ಮಾತ್ರವಲ್ಲ ತಮಿಳುನಾಡು, ಆಂದ್ರ ಹಾಗೂ ಮಹಾರಾಷ್ಟ್ರದ ರೈತರಿಗೂ ಉಪಯುಕ್ತವಾಗಿದೆ. ಪ್ರಸ್ತುತ ವಿಶ್ವಮಟ್ಟದಲ್ಲಿ ಕರ್ನಾಟಕದ ರೈತರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಪದ್ಮಶ್ರೀ ವಿಜೇತ ಹಾಗೂ ವಿಶ್ರಾಂತ ಕುಲಪತಿ ಡಾ. ಎಂ. ಮಹದೇವಪ್ಪ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಗೋವಿನ ಜೋಳದ ಹಸ್ತ ಪ್ರತಿ ಬಿಡುಗಡೆ ಮಾಡಲಾಯಿತು.