ರು. 98 ಸಾವಿರ ಮೌಲ್ಯದ ಗಾಂಜಾ ವಶ
ಬಳ್ಳಾರಿ: ತಾಲೂಕಿನ ಸಿಂಧಿಗೇರಿಯಲ್ಲಿ ಗಾಂಜಾ ಬೆಳೆಯುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ರು. 98 ಸಾವಿರ ಬೆಲೆಬಾಳುವ ಗಾಂಜಾ ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಬಂಧಿತರು ಸಿಂಧಿಗೇರಿಯ ದೇವರಮನೆ ಬಸಪ್ಪ, ದೇವರಮನೆ ಮಲ್ಲಿಕಾರ್ಜುನ. ಈ ರೈತರು ಅನಧಿಕೃತವಾಗಿ ಹೊಲದ ಮಧ್ಯ 2 ಎಕರೆ ಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕುರುಗೋಡು ಪ್ರಭಾರಿ ಇನ್ಸ್ಪೆಕ್ಟರ್ ಕಾಳಿಕೃಷ್ಣ ಹಾಗೂ ಠಾಣೆಯ ಸಬ್ಇನ್ಸ್ಪೆಕ್ಟರ್ ಸೋಮಶೇಖರ ಮತ್ತು ಸಿಬ್ಬಂದಿ ದಾಳಿ ಮಾಡಿ, 98 ಕೆಜಿ ಗಾಂಜಾ ವಶಪಡಿಸಿಕೊಂಡು ದೇವರಮನೆ ಬಸಪ್ಪ, ದೇವರಮನೆ ಮಲ್ಲಿಕಾರ್ಜುನ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.