ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಬೊಹಳ್ಳಿಗೆ ಸರ್ಕಾರಿ ಕಚೇರಿ ಅಲರ್ಜಿ!

Lingaraj Badiger
Updated On : 25 Sept 2013, 11:04 am

ಹಗರಿಬೊಮ್ಮನಹಳ್ಳಿ: ಸರ್ಕಾರದ ಇಲಾಖೆಗಳ ಪ್ರಮುಖ ಕಚೇರಿಗಳನ್ನು ಹೊಂದುವಲ್ಲಿ ಹಗರಿಬೊಮ್ಮನಹಳ್ಳಿ ಒಂದು ರೀತಿಯಲ್ಲಿ ಶಾಪಗ್ರಸ್ತ ಎನ್ನಬಹುದು.
ಯಾಕೆಂದರೆ ಪಂಚಾಯತ್ ರಾಜ್ ಎಂಜಿನಿಯರಿಂಗ್, ಲೋಕೋಪಯೋಗಿ, ಭೂಸೇನಾ, ಪೊಲೀಸ್, ಸಣ್ಣ ನೀರಾವರಿ...... ಹೀಗೆ ಸಾಲು ಸಾಲು ಸರ್ಕಾರಿ ಇಲಾಖೆಗಳ ವಿಭಾಗೀಯ ಕಚೇರಿಗಳು ಇನ್ನೇನು ಇಲ್ಲಿ ಆರಂಭವಾಗುತ್ತವೆ ಎನ್ನುವಾಗಲೆ ಕೊನೆ ಕ್ಷಣದಲ್ಲಿ ಈ ಎಲ್ಲ ಇಲಾಖೆಗಳ ವಿಭಾಗೀಯ ಕಚೇರಿಗಳು ಪಕ್ಕದ ಹೂವಿನಹಡಗಲಿಯಲ್ಲಿ ಸೇರಿದವು.
ಈಗ ಆ ಸಾಲಿನಲ್ಲಿ ಜೆಸ್ಕಾಂ ವಿಭಾಗೀಯ ಕಚೇರಿ ಬಂದು ನಿಂತಿದೆ. ಇದು ದುರದೃಷ್ಟ ಎನ್ನುವುದಕ್ಕಿಂತಲೂ ಈ ತಾಲೂಕನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳ ರಾಜಕೀಯ ಇಚ್ಛಾಶಕ್ತಿ ಕೊರತೆ ಎಂದು ಹೇಳಬಹುದು.
ಆಡಳಿತ ದೃಷ್ಟಿಯಿಂದ ಹೊಸಪೇಟೆ ವಿಭಾಗವನ್ನು ನಗರ ಮತ್ತು ಗ್ರಾಮೀಣ ಎಂದು ಜೆಸ್ಕಾಂ ಇಲಾಖೆ ಪ್ರತ್ಯೇಕಿಸಿ, ಹೊಸದಾಗಿ ಅಸ್ತಿತ್ವಕ್ಕೆ ಬರುವ ಗ್ರಾಮೀಣ ವಿಭಾಗಕ್ಕೆ ಹಗರಿಬೊಮ್ಮನಹಳ್ಳಿಯನ್ನು ಕೇಂದ್ರಸ್ಥಾನವನ್ನಾಗಿ ಜನವರಿ ತಿಂಗಳಿನಲ್ಲಿಯೇ ಜೆಸ್ಕಾಂ ಮಂಜೂರು ಮಾಡಿತ್ತು. ಹಲವು ವರ್ಷಗಳಿಂದಲೂ ವಿಭಾಗೀಯ ಕಚೇರಿಗಳನ್ನು ಕಳೆದುಕೊಳ್ಳುವ ಶಾಪಕ್ಕೆ ಗುರಿಯಾಗಿದ್ದ  ಹಗರಿಬೊಮ್ಮನಹಳ್ಳಿಯಲ್ಲಿ ಜೆಸ್ಕಾಂ ವಿಭಾಗೀಯ ಕಚೇರಿ ತೆರೆಯುವ ಸುದ್ದಿ ಸಹಜವಾಗಿಯೇ ತಾಲೂಕಿನ ಜನತೆಯಲ್ಲಿ ಸಂತಸ ಮೂಡಿಸಿತ್ತು. ಅಲ್ಲದೆ ಜೆಸ್ಕಾಂ ವಿಭಾಗೀಯ ಕಚೇರಿಯಾದರೂ ಇಲ್ಲಿಗೆ ಬಂತಲ್ಲ ಸಾಕು ಎಂಬ ನೆಮ್ಮದಿ ಜನತೆಯ ಮುಖದಲ್ಲಿತ್ತು.
ಆದರೆ, ಆ ನೆಮ್ಮದಿ ಈಗ ಕ್ಷಣಿಕ ಎನ್ನುವ ಲಕ್ಷಣಗಳು ದೊಡ್ಡದಾಗಿ ಕಾಣಿಸುತ್ತಿವೆ.  ಮಂಜೂರಾಗಿರುವ ವಿಭಾಗೀಯ ಕಚೇರಿಯನ್ನು ಇಲ್ಲಿಂದ ಹೂವಿನಹಡಗಲಿಗೆ ಎತ್ತಂಗಡಿ ಮಾಡಲು ಇಲಾಖೆಯ ಒಳಗಡೆ ಸ್ಥಳಾಂತರಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ಬಿರುಸಾಗಿ ನಡೆಯುತ್ತಿರುವುದು ಬಹಿರಂಗವಾಗಿದೆ. ಹೀಗಾಗಿ ಮತ್ತೊಮ್ಮೆ ಹಗರಿಬೊಮ್ಮನಹಳ್ಳಿ ಮಡಿಲಿನಿಂದ ಮಂಜೂರಾಗಿರುವ ಜೆಸ್ಕಾಂ ವಿಭಾಗೀಯ ಕಚೇರಿ ಕಳಚಿಕೊಳ್ಳುವ ಎಲ್ಲ ಸಾಧ್ಯತೆಗಳು ಗಟ್ಟಿಗೊಂಡಿವೆ.
ಜನಜಾಗೃತಿ: ಮಂಜೂರಾಗಿರುವ ಜೆಸ್ಕಾಂ ವಿಭಾಗೀಯ ಕಚೇರಿ ಹೂವಿನಹಡಗಲಿಗೆ ಎತ್ತಂಗಡಿಯಾಗುವ ಸೂಚನೆ ತಿಳಿದ ಕರವೇ (ನಾರಾಯಣಗೌಡ) ಪದಾಧಿಕಾರಿಗಳು ಹೊಸಪೇಟೆ ವಿಭಾಗೀಯ ಕಚೇರಿಗೆ ಭೇಟಿ ನೀಡಿ ಯಾವುದೆ ಕಾರಣಕ್ಕೂ ಮಂಜೂರಾಗಿರುವ ಕಚೇರಿಯನ್ನು ಸ್ಥಳಾಂತರ ಮಾಡದಂತೆ ಮನವಿ ಪತ್ರ ಸಲ್ಲಿಸಿದರು.
ಅಲ್ಲಿಗೂ ಸುಮ್ಮನಾಗದ ಕರವೇ ಕಾರ್ಯಕರ್ತರು ರೈತ ಸಂಘ, ಗುತ್ತಿಗೆದಾರರ ಸಂಘ, ವಿವಿಧ ಸಂಘ-ಸಂಸ್ಥೆಗಳ ಗಮನಕ್ಕೆ ಈ ವಿಚಾರ ತಂದು ವಿಭಾಗೀಯ ಕಚೇರಿ ಎತ್ತಂಗಡಿಯಾಗದಂತೆ ಜನಜಾಗೃತಿ ಮೂಡಿಸುತ್ತಿದ್ದಾರೆ.
ಹಗರಿಬೊಮ್ಮನಹಳ್ಳಿ ಸೆಂಟರ್ ಪಾಯಿಂಟ್: ಬಳ್ಳಾರಿ ಜಿಲ್ಲೆಯ ಪಶ್ಚಿಮ ಭಾಗದಲ್ಲಿನ ಹಗರಿಬೊಮ್ಮನಹಳ್ಳಿ ಈ ವ್ಯಾಪ್ತಿಯಲ್ಲಿ ಬರುವ ಹೂವಿನಹಡಗಲಿ, ಕೂಡ್ಲಿಗಿ ಮುಂದೆ ಹೊಸ ತಾಲೂಕಾಗುವ ಕೊಟ್ಟೂರುಗೆ ಸೆಂಟರ್ ಪಾಯಿಂಟ್. ಈ ಮೂರು ತಾಲೂಕು ಕೇಂದ್ರಗಳಿಗೆ ಎಲ್ಲದಿಕ್ಕಿನಿಂದಲೂ ಸರಾಸರಿ 30 ಕಿ.ಮೀ. ಅಂತರದಲ್ಲಿ ಹಗರಿಬೊಮ್ಮನಹಳ್ಳಿಯಿದೆ.
ಅಲ್ಲದೆ ಮುಖ್ಯವಾಗಿ ಕೂಡ್ಲಿಗಿ, ಕೊಟ್ಟೂರಿನ ಗಡಿಗ್ರಾಮಗಳಿಗೆ ಹಗರಿಬೊಮ್ಮನಹಳ್ಳಿ ತೀರಾ ಹತ್ತಿರ. ಉತ್ತಮ ರಸ್ತೆ ಸಂಪರ್ಕ, ಸುಗಮ ಸಾರಿಗೆ ವ್ಯವಸ್ಥೆ ಹೊಂದಿರುವ ಹಗರಿಬೊಮ್ಮನಹಳ್ಳಿ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಪಟ್ಟಣವು ಹೌದು.
ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು ಪಟ್ಟಣಗಳಿಗೆ ನೀರು ಪೂರೈಸುವ ಬೃಹತ್ ಯೋಜನೆ, ಮಾಲ್ವಿಡ್ಯಾಂ ಸೇರಿದಂತೆ ಹತ್ತಾರು ನೀರಾವರಿ ಯೋಜನೆಗಳು, ಮುಖ್ಯವಾಗಿ ಇಡೀ ರಾಜ್ಯದಲ್ಲಿ ಅತಿಹೆಚ್ಚು ಪಂಪ್‌ಸೆಟ್ ಹೊಂದಿರುವ ಹತ್ತು ಪ್ರಮುಖ ತಾಲೂಕುಗಳಲ್ಲಿ ಹಗರಿಬೊಮ್ಮನಹಳ್ಳಿ ಒಂದು. ಹೀಗಾಗಿ ಜೆಸ್ಕಾಂ ವಿಭಾಗೀಯ ಕಚೇರಿ ಇಲ್ಲಿ ತೆರೆಯುವುದು ಅತಿಸೂಕ್ತ.
ಮಂಜೂರಾಗಿರುವ ಗುಲ್ಬರ್ಗಾ ವಿದ್ಯುತ್ ಪ್ರಸರಣ ಕಂಪನಿ(ಜೆಸ್ಕಾಂ)ಯ ವಿಭಾಗೀಯ(ಗ್ರಾಮೀಣ) ಕಚೇರಿಯನ್ನು ಇಲ್ಲಿಂದ ಹೂವಿನಹಡಗಲಿಗೆ ಎತ್ತಂಗಡಿ ಮಾಡಲು ಜೆಸ್ಕಾಂ ಇಲಾಖೆಯ ಒಳಗಡೆ  ನಡೆಯುತ್ತಿದೆ ಎನ್ನಲಾದ ಹುನ್ನಾರ ತಾಲೂಕಿನ ರೈತಾಪಿ ವರ್ಗ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶವನ್ನುಂಟುಮಾಡಿದೆ. ಈ ಹುನ್ನಾರದ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಲು ರಾಜ್ಯ ರೈತಸಂಘದ ನೇತೃತ್ವದಲ್ಲಿ ಹೋರಾಟ ವೇದಿಕೆ ಸಿದ್ಧಗೊಂಡಿದೆ. ಜೆಸ್ಕಾಂ ವಿಭಾಗೀಯ ಕಚೇರಿ ಉಳಿಸಿಕೊಳ್ಳಲು ಸೆ. 30ರಂದು ಹಗರಿಬೊಮ್ಮನಹಳ್ಳಿ ಬಂದ್‌ಗೂ ಸಂಘಟನೆಗಳು ಕರೆ ನೀಡಿವೆ. ಈ ಸಲವಾದರೂ ವಿಭಾಗೀಯ ಕಚೇರಿ ಶಾಪವಿಮೋಚನೆಯಾಗುವುದೇ ಕಾದುನೋಡಬೇಕು.
-ಹುಳ್ಳಿಪ್ರಕಾಶ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement