ಪಡಿತರ ಅಕ್ಕಿ ಅಕ್ರಮ ದಾಸ್ತಾನು ವಶಕ್ಕೆ
ಬಳ್ಳಾರಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಗೋದಾಮಿನ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ಮಾಡಿ, 75 ಕೆಜಿ ತೂಕದ ರು. 1.60 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಕುರುಗೋಡಿನ ಆನಂದ್ ಚೌದರಿಗೆ ಸೇರಿದ ದೊಡ್ಡಬಸವೇಶ್ವರ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಆಹಾರ ಇಲಾಖೆ ಉಪನಿರ್ದೇಶಕ ಮಾಂಟೆಸ್ವಾಮಿ, ಕುರುಗೋಡು ಠಾಣೆ ಪಿಎಸ್‌ಐ ಸೋಮಶೇಖರ್ ನೇತೃತ್ವದಲ್ಲಿ ದಾಳಿ ಮಾಡಿ, 75 ಕೆಜಿ ತೂಕದ 316 ಪ್ಯಾಕೆಟ್ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಮಿಲ್‌ನ ಮಾಲೀಕ ಆನಂದ್ ಚೌದರಿ ಅವರ ಮೇಲೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿ ಎಪಿಎಂಸಿ ಠಾಣೆ ವ್ಯಾಪ್ತಿಯ ಎಪಿಎಂಸಿಯಲ್ಲಿ ಲಾರಿಯೊಂದು ಪಡಿತರ ಅಕ್ಕಿ ಮಾರಾಟ ಮಾಡಲು ತಂದಾಗ ಅದರಲ್ಲಿದ್ದ 50 ಕೆಜಿ ತೂಕದ 100 ಪ್ಯಾಕೆಟ್ ಪಡಿತರ ಅಕ್ಕಿಯನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಲಾರಿ ಚಾಲಕ ಕಲೀಲ್, ಅಕ್ಕಿ ಮಾರಲು ಬಂದ ಇಲಿಯಾಜ್ ಎನ್ನಲಾಗಿದೆ. ಇವರು ಕುರುಗೋಡಿನ ದೊಡ್ಡಬಸವೇಶ್ವರ ರೈಸ್‌ಮಿಲ್‌ನಿಂದ ಮಾರಾಟ ಮಾಡಲು ಅಕ್ಕಿ ತೆಗೆದುಕೊಂಡು ಬಂದಾಗ, ಖಚಿತ ಮಾಹಿತಿ ಆಧರಿಸಿ ಪಿಎಸ್‌ಐ ನಿರಂಜನ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆ ಗೋವರ್ಧನ್ ದಾಳಿ ಮಾಡಿ ಅಕ್ಕಿ ವಶಪಡಿಸಿಕೊಂಡಿದ್ದಾರೆ.
--