ಪೌರಕಾರ್ಮಿಕರನ್ನು ಗೌರವದಿಂದ ಕಾಣಿ: ನೀಲಕಂಠ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 25
ಪೌರಕಾರ್ಮಿಕರನ್ನು ಗೌರವದಿಂದ ನೋಡಿದಾಗ ಮಾತ್ರ ಪೌರಕಾರ್ಮಿಕರು ತಮ್ಮ ಕರ್ತವ್ಯದಲ್ಲಿ ಮುಂದುವರಿಯಲು ಸಾಧ್ಯ. ಇಲ್ಲವಾದಲ್ಲಿ ಪೌರಕಾರ್ಮಿಕರು ಮುಂದಿನ ದಿನಗಳಲ್ಲಿ ಸಿಗುವುದು ದುಸ್ತರವಾಗಲಿದೆ ಎಂದು ಕರ್ನಾಟಕ ಪೌರಸೇವಾ ನೌಕರರ ಸಂಘ ಹೊಸಪೇಟೆ ಘಟಕದ ಅಧ್ಯಕ್ಷ ಜಿ. ನೀಲಕಂಠ ಹೇಳಿದರು.
ನಗರದ ಯಾತ್ರಿ ನಿವಾಸದಲ್ಲಿ ಸೋಮವಾರ ಜನಾಂದೋಲನ-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯಿಂದ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪೌರಕಾರ್ಮಿಕರು ಬೆಳಗ್ಗೆ 5 ಗಂಟೆಗೆ ಬಂದು ಊರಿನ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಿತ್ಯವೂ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಒಂದು ದಿನ ಸ್ವಚ್ಛಗೊಳಿಸುವುದನ್ನು ಪೌರಕಾರ್ಮಿಕರು ಬಿಟ್ಟರೆ ಇಡೀ ಊರೇ ಗಬ್ಬೆದ್ದು ನಾರುತ್ತದೆ. ಪೌರಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಕಾಳಜಿವಹಿಸದೇ ಊರಿನ ಸ್ವಚ್ಛತೆಗೆ ಹೆಚ್ಚು ಗಮನ ನೀಡಿರುವುದರಿಂದ ನಗರಗಳು ಸ್ವಚ್ಛವಾಗಿ ಕಾಣುತ್ತಿವೆ. ಪೌರಕಾರ್ಮಿಕರನ್ನು ಸದಾ ಗೌರವದಿಂದ ಕಾಣುವಂಥ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.
ಸಂಘಟನಾ ಸಂಚಾಲಕ ರಾಮಚಂದ್ರ ಮಾತನಾಡಿ, ಕರ್ನಾಟಕದಲ್ಲಿ ಗುತ್ತಿಗೆ ಪೌರಕಾರ್ಮಿಕರನ್ನು ಗುಲಾಮರಂತೆ ಕಾಂಟ್ರಾಕ್ಟರ್ ಮತ್ತು ಅಧಿಕಾರಿಗಳು ನೋಡುವ ಪ್ರವೃತ್ತಿ ನಿರ್ಮಾಣವಾಗುತ್ತಿರುವುದು ಖೇದಕರ ಸಂಗತಿಯಾಗಿದೆ. ಗುತ್ತಿಗೆ ಪೌರಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳಾದ ಕನಿಷ್ಠ ವೇತನ, ಪಿಎಫ್, ಇಎಸ್‌ಐ ಯೂನಿಫಾರ್ಮ್ ಇಡೀ ಕರ್ನಾಟಕದಲ್ಲೇ ಎಲ್ಲಿಯೂ ನೀಡುತ್ತಿಲ್ಲ. ಗುತ್ತಿಗೆ ಪೌರಕಾರ್ಮಿಕರು ಕಾರ್ಮಿಕರಲ್ಲವೇ ಗುತ್ತಿಗೆ ಪೌರಕಾರ್ಮಿಕರಿಗೆ ಅವರ ಸೇವೆಯನ್ನು ಪರಿಗಣಿಸಿ ಕಾಯಂಗೊಳಿಸಬೇಕು. ರು. 15 ಸಾವಿರ ವೇತನ ನೀಡಬೇಕು. ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಪೌರಕಾರ್ಮಿಕರನ್ನು ಸರ್ಕಾರವೇ ನೇರವಾಗಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಮತ್ತು ಬೆಳಗಿನ ಜಾವ 5 ಗಂಟೆಗೆ ಅಲ್ಲದೇ ಬೆಳಗ್ಗೆ 10.30 ಗಂಟೆಗೆ ಕೆಲಸಕ್ಕೆ ಹಾಜರಾಗಲು ಕರ್ನಾಟಕ ಸರ್ಕಾರವೂ ಉತ್ತರ ಪ್ರದೇಶ ಮಾದರಿಯಲ್ಲಿ ನೀತಿಯನ್ನು ತರಬೇಕು ಮತ್ತು ಹೊಸಪೇಟೆಯ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಮತ್ತು ಗುತ್ತಿಗೆ ಪೌರಕಾರ್ಮಿಕರಿಗೆ ನಿವೇಶನ ಹಾಗೂ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದರು.
ಹೊಸಪೇಟೆ ಸ್ಲಂ ಸಮಿತಿ ಸಂಚಾಲಕಿ ಎನ್. ಹುಲಿಗೆಮ್ಮ, ಯುವ ಘಟಕದ ಎಂ. ಹನುಮಂತರಾಯ, ಗುತ್ತಿಗೆ ಪೌರಕಾರ್ಮಿಕರಾದ ಜಗನ್ನಾಥ್, ತಿರುಕಪ್ಪ, ಪುಲ್ಲನ್ನ, ವೆಂಕಟೇಶ್, ಸಮಾನ ಮಕ್ಕಳ ಮಂಟಪ ಕಾರ್ಯಕರ್ತ ಕೆ. ವೆಂಕಟೇಶುಲು ಸೇರಿದಂತೆ ಹೊಸಪೇಟೆಯ ಗುತ್ತಿಗೆ ಪೌರಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು.