ಮಟ್ಕಾ: ಮೂವರ ಬಂಧನ
ಬಳ್ಳಾರಿ: ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಹೊಸಪೇಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ರು. 65,400, 2 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸಪೇಟೆ ಪಟ್ಟಣದ ಮೆಹಬೂಬ್ ನಗರದ ಮನ್ಸೂರ್, ಅಂಜಿನಿ, ಗುರಾಡಿ ಹನುಮಂತ ಅಲಿಯಾಸ್ ಕೋಣ ಎಂಬುವವರನ್ನು ಬಂಧಿಸಲಾಗಿದೆ. ಮೆಹಬೂಬ್ ನಗರದಲ್ಲಿ ಮಟ್ಕಾ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಹೊಸಪೇಟೆ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ. ಈ ಕುರಿತು ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂದರ್ ಬಾಹರ್: 14 ಜನರ ಬಂಧನ
ಬಳ್ಳಾರಿ: ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಕುರುಗೋಡು ಪೊಲೀಸರು ದಾಳಿ ಮಾಡಿ 14 ಜನರನ್ನು ಬಂಧಿಸಿ, ರು. 47,940 ವಶಪಡಿಸಿಕೊಂಡಿರುವ ಘಟನೆ ಶ್ರೀನಿವಾಸ ಕ್ಯಾಂಪಿನಲ್ಲಿ ಮಂಗಳವಾರ ನಡೆದಿದೆ. ಕುರುಗೋಡು ಸಮೀಪದ ಶ್ರೀನಿವಾಸ ಕ್ಯಾಂಪಿನ ಸಮೀಪದ ಸಂಜೀವಪ್ಪ ಜಮೀನಿನಲ್ಲಿ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ 14 ಜನರನ್ನು ಬಂಧಿಸಿ, 12 ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.