ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿಮ್ಸ್ ಸಿಬ್ಬಂದಿ ಎಡವಟ್ಟು: 25 ದಿನದ ಹಸುಗೂಸು ಕೋರ್ಟ್‌ಗೆ!

Lingaraj Badiger
Updated On : 26 Sept 2013, 11:33 am

ಬಳ್ಳಾರಿ: 25 ದಿನಗಳ ಎರಡು ಹಸುಗೂಸುಗಳು ನ್ಯಾಯಾಲಯದ ಮೆಟ್ಟಿಲು ಏರುವ ಮೂಲಕ ರಾಜ್ಯ, ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಿ ಎಲ್ಲರ ಕುತೂಹಲಕ್ಕೆ ಕಾರಣವಾಗಿವೆ.
ಹೌದು, ಈ ಘಟನೆ ನಡೆದಿರುವುದು ಬಳ್ಳಾರಿಯ 2ನೇ ಅಪರ ಸಿವಿಲ್ ಕಿರಿಯ ನ್ಯಾಯಾಲಯದಲ್ಲಿ. ಇದಕ್ಕೆ ಕಾರಣ ಇಲ್ಲದಿಲ್ಲ. ಆಗಸ್ಟ್ 31ರಂದು ವಿಮ್ಸ್‌ನಲ್ಲಿ 10 ನಿಮಿಷಗಳ ಅಂತರದಲ್ಲಿ ಇಬ್ಬರು ತಾಯಂದಿರಿಗೆ ಹೆರಿಗೆಯಾಗಿದೆ. ಆದರೆ ವಿಮ್ಸ್ ಸಿಬ್ಬಂದಿ ಮಾಡಿದ ಎಡವಟ್ಟಿನಿಂದಾಗಿ ಮಕ್ಕಳು ಅದಲು ಬದಲಾಗಿದ್ದವು. ಈ ಹಿನ್ನೆಲೆಯಲ್ಲಿ ಆ ಹಸುಗೂಸುಗಳ ಪೋಷಕರು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಬುಧವಾರ ಬಳ್ಳಾರಿಯ 2ನೇ ಅಪರ ಸಿವಿಲ್ ಕಿರಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, 25 ದಿನದ ಹಸುಗೂಸುಗಳೊಂದಿಗೆ ಪೋಷಕರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಹೆರಿಗೆ ನೋವಿನ ಹಿನ್ನೆಲೆಯಲ್ಲಿ ವಿಶಾಲಾಕ್ಷಿ ಹಾಗೂ ಪದ್ಮಾವತಿ ಎಂಬುವವರು ಆ. 31ರಂದು ವಿಮ್ಸ್ ಆಸ್ಪತ್ರೆಗೆ ದಾಖಲಾಗಿ, 10 ನಿಮಿಷಗಳ ಅಂತರದಲ್ಲಿ ಇಬ್ಬರು ಮಹಿಳೆಯರು ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆ ಕೂಸುಗಳು ಅದಲು ಬದಲಾಗಿ, ಯಾವ ಮಗು ಯಾರದು ಎಂಬುದು ಇಬ್ಬರಲ್ಲೂ ಗೊಂದಲವಾಗಿತ್ತು. ಇದರಿಂದಾಗಿ ಇಬ್ಬರು ನ್ಯಾಯಾಲಯದ ಮೆಟ್ಟಿಲು ಏರಿದ್ದರು. 2ನೇ ಅಪರ ಸಿವಿಲ್ ಕಿರಿಯ ನ್ಯಾಯಾಲಯದ ಮುಂದೆ ವಿಚಾರಣೆ ಬಂದಾಗ 25 ದಿನದ ಹಸುಗೂಸುಗಳು, ಅವರ ಪೋಷಕರು ನ್ಯಾಯಾಲಯದ ಮುಂದೆ ಹಾಜರಾದರು. ಇವರೊಂದಿಗೆ ವಿಮ್ಸ್ ಅಧೀಕ್ಷಕರೂ ಹಾಜರಾಗಿದ್ದರು. ನ್ಯಾಯಾಧೀಶೆ ಜರಿನಾ ಬೇಗಂ ಸಮ್ಮುಖದಲ್ಲೇ ಹಸುಗೂಸು, ಮಕ್ಕಳ ತಾಯಂದಿರಾದ ವಿಶಾಲಾಕ್ಷಿ, ಪದ್ಮಾವತಿ, ತಂದೆಯ ರಕ್ತದ ಮಾದರಿ  ಪಡೆದು ಪರೀಕ್ಷೆಗಾಗಿ ಬೆಂಗಳೂರಿನ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಬಂದ ಮೇಲೆ ಯಾವ ಮಗು, ಯಾವ ಪೋಷಕರಿಗೆ ಸೇರಿದ್ದು ಎಂಬುದನ್ನು ನ್ಯಾಯಾಲಯ ತೀರ್ಮಾನಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement