ಸೇವಾಭದ್ರತೆ: ಅತಿಥಿ ಉಪನ್ಯಾಸಕರ ಆಗ್ರಹ
ಬಳ್ಳಾರಿ: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸುವುದು, ಕಾಯಂಗೊಳಿಸಬೇಕು, ಯುಜಿಸಿ ನಿಯಮದಂತೆ ತಿಂಗಳಿಗೆ ರು. 25 ಸಾವಿರ ವೇತನ ನಿಗದಿಗೊಳಿಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ, ಬಳ್ಳಾರಿ ಜಿಲ್ಲಾ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಹಾಗೂ ಡಿವೈಎಫ್‌ಐ ಜಿಲ್ಲಾ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಜಿಲ್ಲಾ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಡಾ. ಟಿ. ದುರುಗಪ್ಪ ಮಾತನಾಡಿ, ರಾಜ್ಯ ಸರ್ಕಾರದ 362 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 15 ವರ್ಷಗಳಿಂದ ಅರೆಕಾಲಿಕ ಮತ್ತು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ತಿಂಗಳಿಗೆ ಕೇವಲ ರು. 2-3 ಸಾವಿರದಂತೆ ವರ್ಷಕ್ಕೊಂದು ಬಾರಿ ವೇತನ ಪಡೆಯುತ್ತಾ ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬುನಾದಿಯಾಗಿ ಬಂದಿರುವ ಅತಿಥಿ ಉಪನ್ಯಾಸಕರು ಇಂದು ಬೀದಿ ಪಾಲಾಗಿದ್ದಾರೆ. ಆಡಳಿತ ನಡೆಸುವ ಸರ್ಕಾರಗಳು ಎಲ್ಲ ಜನತೆಯ ಏಳ್ಗೆಗಾಗಿ ಉದ್ಯೋಗ ಆಧಾರಿತ ಜನಾಭಿವೃದ್ಧಿ ನೀತಿಗಳನ್ನು ಕೈಬಿಟ್ಟು ಕೇವಲ ಕಾರ್ಪೋರೇಟ್ ಕಂಪನಿಗಳಿಗೆ ಲಾಭ ತರುವ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತಿವೆ. ಹೀಗಾಗಿಯೇ ಶಿಕ್ಷಣ ಕ್ಷೇತ್ರ ಸೇರಿದಂತೆ ಇಡೀ ಸೇವಾ ಕ್ಷೇತ್ರಗಳನ್ನು ವಾಣಿಜ್ಯಕರಿಸಿ ಕಾಯಂ ಉದ್ಯೋಗದ ಪರಿಕಲ್ಪನೆಯನ್ನೇ ನಾಶಗೊಳಿಸಲಾಗಿದೆ ಎಂದು ದೂರಿದರು.
ರು. 25 ಸಾವಿರ ವೇತನ ನೀಡಿ: ಪ್ರಸಕ್ತ ಸಾಲಿನಿಂದ ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡ ಸರ್ಕಾರ, ಕೇವಲ ಸ್ನಾತಕೋತ್ತರ ಪದವಿಗೆ ರು. 8 ಸಾವಿರ, ಎಂಫಿಲ್, ಪಿಎಚ್‌ಡಿ ಪದವೀಧರರಿಗೆ ರು. 10 ಸಾವಿರ ವೇತನ ನೀಡುತ್ತಿದೆ. ಈ ಕಡಿಮೆ ವೇತನ ಯಾವುದಕ್ಕೂ ಸಾಲದೆ, ನಿತ್ಯ ಸಂಕಷ್ಟ ಪರಿಸ್ಥಿತಿ ಅನುಭವಿಸುವಂತಾಗಿದೆ. ಹೀಗಾಗಿ ಕೇರಳ, ತಮಿಳುನಾಡು ಹಾಗೂ ಪಂಜಾಬ್ ರಾಜ್ಯಗಳಲ್ಲಿ ನೀಡುವಂತೆ ಕೇಂದ್ರ ಹಣಕಾಸು ಆಯೋಗದ ನಿಯಮಗಳಂತೆ ರು. 20-25 ಸಾವಿರ ಮಾಸಿಕ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ, ಅವರನ್ನು ಕಾಯಂಗೊಳಿಸಬೇಕು. ಪ್ರತಿ ಶೈಕ್ಷಣಿಕ ವರ್ಷದಲ್ಲಿ 12 ತಿಂಗಳು ವೇತನ ಪಾವತಿಸಲು ಕ್ರಮ ಕೈಗೊಳ್ಳಬೇಕು. ವಯೋವುತಿ ಮೀರಿರುವ ಮತ್ತು ಮೀರುತ್ತಿರುವ ಅತಿಥಿ ಉಪನ್ಯಾಸಕರಿಗೆ ಉಪನ್ಯಾಸಕ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು. ಖಾಲಿ ಇರುವ ಉಪನ್ಯಾಸಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ, ಕನಿಷ್ಠ 5 ವರ್ಷ ಸೇವಾ ಅನುಭವ ಪರಿಗಣಿಸಿ, ವರ್ಷಕ್ಕೆ 5ರಂತೆ ಕೃಪಾಂಕ ನೀಡಬೇಕು ಎಂದು ಒತ್ತಾಯಿಸಿದರು.
ರಜೆ ಸೌಲಭ್ಯ ನೀಡಿ: ಯುಜಿಸಿ ನಿಯಮಾವಳಿಯಂತೆ ಕಾಯಂ ಉಪನ್ಯಾಸಕರಿಗಿದ್ದಂತೆ ಅತಿಥಿ ಉಪನ್ಯಾಸಕರಿಗೂ ರಜೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಬೇಕು. ನೇಮಕಾತಿ ಸಂದರ್ಭದಲ್ಲಿ ಎಂಫಿಲ್ ಪದವಿ ಪರಿಗಣಿಸಬೇಕು. ಪ್ರಸಕ್ತ ಸಾಲಿನಲ್ಲಿ ಅತಿಥಿ ಉಪನ್ಯಾಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮುಂದುವರಿಸಬೇಕು. ಯಾವುದೇ ಕಾರಣಕ್ಕೂ ಸೇವೆಯಿಂದ ಬಿಡುಗಡೆಗೊಳಿಸಬಾರದು ಸೇರಿದಂತೆ ತಮ್ಮ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅನಂತರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು. ಒಕ್ಕೂಟದ ಉಪಾಧ್ಯಕ್ಷ ಡಾ. ಎಚ್. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ. ಬಸಪ್ಪ, ಕಾರ್ಯದರ್ಶಿ ಡಾ.ಡಿ. ಸಿದ್ದೇಶ್, ಸಹಕಾರ್ಯದರ್ಶಿ ಡಾ. ಟಿ. ರುದ್ರಮುನಿ, ಡಾ. ಶ್ಯಾಂಮೂರ್ತಿ, ಜಿ.ಎಚ್. ಹನುಮೇಶ್, ಖಜಾಂಚಿ ಶಿವಕುಮಾರ ಅಂಗಡಿ, ಗಂಗಾಧರ, ಮಹಿಳಾ ಪ್ರತಿನಿಧಿ ಅನಿತಾ, ಶುಭಜ್ಯೋತಿ, ಸುಭಾಷಿಣಿ, ಸದಸ್ಯರು ಮತ್ತು ನೂರಾರು ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು. ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ಶಶೀಲ್ ನಮೋಶಿ ಆಗಮಿಸಿ ಬೆಂಬಲ ವ್ಯಕ್ತಪಡಿಸಿದರು.