ಹೊಸಪೇಟೆಯಲ್ಲಿ ಎಸ್ಎಫ್ಐ ಪದಾಧಿಕಾರಿಗಳಿಂದ ರಸ್ತೆತಡೆ
ಹೊಸಪೇಟೆ: ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಮತ್ತು ಮಾಸಿಕ ವೇತನ ಪಾವತಿಗೆ ಆಗ್ರಹಿಸಿ ಇಲ್ಲಿನ ಎಸ್ಎಫ್ಐ ಸಂಘಟನೆಯ ತಾಲೂಕು ಸಮಿತಿ ಪದಾಧಿಕಾರಿಗಳು ನಗರದ ವಿಜಯನಗರ ಕಾಲೇಜು ಮುಂದಿನ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಿದರು.
ಎಸ್ಎಫ್ಐ ತಾಲೂಕು ಅಧ್ಯಕ್ಷ ಟಿ. ಶರತ್ಕುಮಾರ್ ಮಾತನಾಡಿ, ರಾಜ್ಯದ ಸರ್ಕಾರಿ ಪದವಿ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಸ್ಥಿತಿ ನೀರಿನ ಮೇಲಿನ ಗುಳ್ಳೆ ಇದ್ದಂತಿದೆ. ಸುಮಾರು 12 ಸಾವಿರಕ್ಕೂ ಹೆಚ್ಚು ಉಪನ್ಯಾಸಕರು ಪದವಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಲವು ಕಾಲೇಜುಗಳಲ್ಲಿ ಕೆಲ ವಿಭಾಗದ ಮುಖ್ಯಸ್ಥರು ಇಲ್ಲದ ಕಾರಣ ಮುಖ್ಯಸ್ಥರು ಮಾಡಬೇಕಾದ ಕೆಲಸದ ನಿರ್ವಹಣೆಯನ್ನು ಅತಿಥಿ ಉಪನ್ಯಾಸಕರೇ ಮಾಡುತ್ತಿದ್ದಾರೆ. ಜತೆಗೆ ಕಾಲೇಜಿನ ಅಭಿವೃದ್ಧಿಗಾಗಿ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ಅತಿ ಶೀಘ್ರದಲ್ಲೇ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರ್ಕಾರ ಕಾಯಂಗೊಳಿಸಿ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು, ಮಾಸಿಕ ವೇತನ ಪಾವತಿ ಮಾಡಬೇಕು, ತಿಂಗಳಿಗೆ ರು. 25 ಸಾವಿರ ವೇತನ ಪಾವತಿಸಬೇಕು. ಅತಿಥಿ ಉಪನ್ಯಾಸಕರಿಗೆ ಸಾಂದರ್ಭಿಕ ರಜೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಎಸ್ಎಫ್ಐ ತಾಲೂಕು ಕಾರ್ಯದರ್ಶಿ ವೈ. ಪಂಪಾನಂದ, ಉಪಾಧ್ಯಕ್ಷೆ ಎಸ್.ವಿ. ವಿಜಯಲಕ್ಷ್ಮಿ, ಸಹಕಾರ್ಯದರ್ಶಿ ವಸಂತಕಲಾಲ್, ತಾಲೂಕು ಸಮಿತಿ ಸದಸ್ಯ ಕೆ. ರಮೇಶ್, ವಿದ್ಯಾರ್ಥಿ ಮುಖಂಡರಾದ ಸಂತೋಷ, ಶ್ರೀಕಾಂತ್, ಬಸವರಾಜ್, ನಿಸಾರ್ ಅಹಮದ್, ಪ್ರಿಯಾಂಕ, ಭುವನ, ಡಿವೈಎಫ್ಐ ತಾಲೂಕು ಸಮಿತಿ ಸದಸ್ಯ ಹನುಮ ನಾಯ್ಕ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಹಸೀಲ್ದಾರ್ ರಮೇಶ್ ಕೋನರಡ್ಡಿ ಮೂಲಕ ಉನ್ನತ ಶಿಕ್ಷಣ ಸಚಿವ ಆರ್. ವಿ. ದೇಶಪಾಂಡೆ ಅವರಿಗೆ ಮನವಿಪತ್ರ ಸಲ್ಲಿಸಿದರು.