ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಾರಿಗೆ ಬಸ್‌ಗೆ ಆಗ್ರಹಿಸಿ ಮನವಿ

Lingaraj Badiger
Updated On : 27 Sept 2013, 10:48 am

ಹಗರಿಬೊಮ್ಮನಹಳ್ಳಿ: ಸಾರಿಗೆ ಬಸ್ ಸೌಲಭ್ಯ ವಂಚಿತ ತಾಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ತಕ್ಷಣ ಬಸ್ ಓಡಾಟ ಕಲ್ಪಿಸುವಂತೆ ಆಗ್ರಹಿಸಿ ಎಸ್‌ಎಫ್‌ಐ ಕಾರ್ಯಕರ್ತರು ಹಗರಿಬೊಮ್ಮನಹಳ್ಳಿ ಘಟಕದ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿದರು. ರಾಮನಗರದ ಈಶ್ವರ ದೇವಸ್ಥಾನದ ಆವರಣದಿಂದ ಬಸ್ ಡಿಪೋ ವರೆಗೂ ಮೆರವಣಿಗೆಯಲ್ಲಿ ಬಂದು ಹಳ್ಳಿಗಳ ರಸ್ತೆ ಮೇಲೆ ಸಾರಿಗೆ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿದರು. ಸಂಬಂಧಿಸಿದ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಪರಿಶೀಲಿಸಿದ ಅನಂತರ ವಾರದೊಳಗೆ ಈ ಬಗ್ಗೆ ಪರಿಶೀಲನೆ ನಡೆಸಿ ಬಸ್ ಸಂಚಾರ ಆರಂಭಿಸುವುದಾಗಿ ಡಿಪೋ ವ್ಯವಸ್ಥಾಪಕರು ಭರವಸೆ ನೀಡಿದರು. ಎಸ್‌ಎಫ್‌ಐ ಕಾರ್ಯದರ್ಶಿ ಎ.ಕೆ. ಬಸವರಾಜ ಮಾತನಾಡಿ, ಹಗರಿಬೊಮ್ಮನಹಳ್ಳಿಯಲ್ಲಿಯೇ ಬಸ್ ಡಿಪೋ ಆರಂಭವಾಗಿದ್ದರೂ ತಾಲೂಕಿನ ಹಲವಾರು ಗ್ರಾಮಗಳಿಗೆ ಬಸ್ ಸಂಚಾರವಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಿಂದ ಉನ್ನತ ಶಿಕ್ಷಣಕ್ಕಾಗಿ ಪಟ್ಟಣಕ್ಕೆ ಆಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೆ ಸಾರಿಗೆ ಸಂಸ್ಥೆಯಿಂದ ಬಸ್ ಓಡಾಟ ಆರಂಭಿಸಿ ಹಳ್ಳಿಗಾಡಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ತಾಲೂಕಿನ ಗಡಿಭಾಗದ ಮಾಗಿಮಾವಿನಹಳ್ಳಿ, ಹಲಗಾಪುರ, ಓಬಾಳಪುರ, ಕಟ್ಟೆಹೊಲ ತಾಂಡಾ, ವ್ಯಾಸಪುರ, ಏಣಿಗಿ, ಏಣಿಗಿ ಬಸಾಪುರ, ಸಾಲಮೂರಹಳ್ಳಿ, ಲೊಕಪ್ಪನ ಹೊಲ ಸೇರಿದಂತೆ ಹಲವಾರು ಹಳ್ಳಿಗಳಿಗೆ ಬಸ್‌ಗಳು ಸಂಚರಿಸುತ್ತಿಲ್ಲ. ಈ ಗ್ರಾಮಗಳಿಗೆ ಸೇರಿದ ನೂರಾರು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಾಗಿ ಹಗರಿಬೊಮ್ಮನಹಳ್ಳಿಯನ್ನೆ ಅವಲಂಬಿಸಿದ್ದಾರೆ. ಬಸ್ ಸಂಚಾರ ಇಲ್ಲದಿರುವುದು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನಿತ್ಯ ಅನಾನುಕೂಲವಾಗಿ ಪರಿಣಾಮಿಸಿದೆ ಎಂದು ವಿವರಿಸಿ,  ಕೂಡಲೆ ಬಸ್ ಸಂಚಾರವಿಲ್ಲದ ಹಳ್ಳಿಗಳಿಗೆ ಬಸ್ ಆರಂಭಿಸುವಂತೆ ಮನವಿ ಮಾಡಿದರು.
ಎಸ್‌ಎಫ್‌ಐ ಉಪಾಧ್ಯಕ್ಷ ಎಂ. ಲಕ್ಷ್ಮಣ, ಮುಖಂಡ ಶ್ರೀನಿವಾಸ, ಗಂಗಾಧರ, ಶ್ರೀಕಾಂತ್, ಹುಲಿಗೇಶ್, ಮೈಲಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement