ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸ್ಲಂಗಳಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ

Lingaraj Badiger
Updated On : 27 Sept 2013, 10:57 am

ಹೊಸಪೇಟೆ: ನಗರದ ಸ್ಲಂಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಇಲ್ಲಿನ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ನಗರಸಭೆ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ಸ್ಲಂ ಜನಜಾಗೃತಿ ಅಂದೋಲನ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ ಮಾತನಾಡಿ, ನಗರದ ಆಶ್ರಯ ಕಾಲೋನಿ, ಚಿತ್ತವಾಡ್ಗಿ, ಚಲುವಾದಿಕೇರಿ, ಮೂರುಗೆರೆ, ಕೆಂಚಮ್ಮನ ಗುಡಿ ಸ್ಲಂ, ಪಿಂಜಾರ ಓಣಿ ಸ್ಲಂಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸುವಂತೆ ನಗರಸಭೆಗೆ ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಅಧಿಕಾರಿಗಳು ಸರಿಯಾದ ಸೂಕ್ತ ಕ್ರಮ ಕೈಗೊಂಡಿಲ್ಲ. ತಕ್ಷಣವೇ ನಗರದ ಎಲ್ಲ ಸ್ಲಂಗಳಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ನಗರದ ಬಹುತೇಕ ಸ್ಲಂಗಳಲ್ಲಿ ಮಹಿಳೆಯರ ಶೌಚಾಲಯಗಳೇ ಇಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯಗಳು ಇಲ್ಲ. ಮಳೆ ಬಂದರೆ ಸ್ಲಂಗಳ ಪ್ರದೇಶದಲ್ಲಿರುವ ತಗ್ಗು ಪ್ರದೇಶದಲ್ಲಿ ನೀರು ತುಂಬಿಕೊಂಡು ಸೊಳ್ಳೆಗಳ ಹೆಚ್ಚಾಗುತ್ತಿದ್ದರೂ ಸ್ಲಂಗಳಲ್ಲಿ ಫಾಗಿಂಗ್ ಹೊಡೆಯುತ್ತಿಲ್ಲ. ವಿದ್ಯುತ್ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ಹೇಳಿದರು.
ಸ್ಲಂ ಜನಜಾಗೃತಿ ಅಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ ಮಾತನಾಡಿದರು. ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಅಧ್ಯಕ್ಷ ಸುನಿಲ್, ಸಂಚಾಲಕರಾದ ಎಂ. ಹನುಮಂತರಾಯ, ಗೌರವಾಧ್ಯಕ್ಷ ಹುಸೇನ್ ಸಾಬ್, ಉಪಾಧ್ಯಕ್ಷ ಮೈಮುನ್ನಿಸಾ, ಮಂಜುನಾಥ, ಕೋಟಿ, ನಾಗಮ್ಮ, ರಹಮತ್ ಬೀ, ರಾಜಮಾ, ವೆಂಕಮ್ಮ, ಅಲೆಮಾರಿ ಸಂಘದ ಮುಖಂಡ ಸಣ್ಣ ಮಾರೆಪ್ಪ, ಕಾರ್ಮಿಕ ಸಂಘಟನೆ ಮುಖಂಡ ವೆಂಕಟೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಹೊಸಪೇಟೆ ನಗರಸಭೆ ಪೌರಾಯುಕ್ತ ಮಹಮ್ಮದ್ ಮುನೀರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement