ಪ್ರವಾಸಿ ತಾಣ ಅಭಿವೃದ್ಧಿ ಉದ್ಯಮವಾಗದಿರಲಿ
ಹೊಸಪೇಟೆ: ಐತಿಹಾಸಿಕ, ಪ್ರೇಕ್ಷಣೀಯ ಹಾಗೂ ಪೌರಾಣಿಕ ಸ್ಥಳಗಳು ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ವಾಣಿಜ್ಯ ಸ್ಥಳಗಳಾಗುತ್ತಿವೆ. ಪ್ರವಾಸಿಗರಿಗೆ ಉಪಯೋಗವಾಗುವಂತಹ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕು ಎಂದು ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ. ಮೃತ್ಯುಂಜಯ ರುಮಾಲೆ ಹೇಳಿದರು.
ನಗರದ ಥಿಯೋಸಾಫಿಕಲ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ, ಅವರು ಮಾತನಾಡಿದರು. ಸಂರಕ್ಷಿತ ಪ್ರದೇಶದಲ್ಲಿ ವ್ಯಾಪಾರೀಕರಣಕ್ಕಿಂತ ಅಲ್ಲಿಯ ಐತಿಹಾಸಿಕ ಸಂಸ್ಕೃತಿ ಉಳಿಸಿಕೊಳ್ಳಬೇಕಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮವನ್ನು ಒಂದು ಉದ್ಯಮವನ್ನಾಗಿ ಬಂಡವಾಳಶಾಹಿಗಳು ಪರಿವರ್ತಿಸಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.
ಐತಿಹಾಸಿಕ ತಾಣಗಳನ್ನು ಉದ್ಯಮ ರೂಪದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಪ್ರವಾಸಿಗರ ಜ್ಞಾನ ಭಂಡಾರ ಹೆಚ್ಚಿಸುವ, ಆಕರ್ಷಿಸುವ ರೀತಿಯಲ್ಲಿ ಅಂತಹ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಹೇಳಿದರು.
ಥಿಯೋಸಾಫಿಕಲ್ ಸೊಸೈಟಿ ಅಧ್ಯಕ್ಷ ಬಾಬಾಲಾಲ್ಜಿ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ ಕ್ಷೇತ್ರ ಅಭಿವೃದ್ಧಿಪಡಿಸಬೇಕು. ಶೈಕ್ಷಣಿಕ ಪ್ರವಾಸದಿಂದ ವಿದ್ಯಾರ್ಥಿಗಳ ಜ್ಞಾನ ಹೆಚ್ಚುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ದೀಪಕ್ಕುಮಾರ್ ಸಿಂಗ್ ಮಾತನಾಡಿ, ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯಗಳ ಕೊರತೆ ಇದೆ. ಪ್ರವಾಸಿಗರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರವಾಸೋದ್ಯಮದ ಅಭಿವೃದ್ಧಿ ನಡೆಸಬೇಕಿದೆ ಎಂದು ಹೇಳಿದರು.
ಥಿಯೋಸಾಫಿಕಲ್ ಸೊಸೈಟಿ ಕಾರ್ಯದರ್ಶಿ ಅಶೋಕ್ ಜೀರೆ, ಥಿಯೋಸಾಫಿಕಲ್ ಮಹಿಳಾ ಕಾಲೇಜು ಪ್ರಾಚಾರ್ಯೆ ಛಾಯಾ, ಪಿಯು ಕಾಲೇಜಿನ ಪ್ರಾಚಾರ್ಯ ಜಗದೀಶ್, ಉಪನ್ಯಾಸಕರಾದ ಚನ್ನಪ್ಪ, ಪ್ರೊ. ಯು. ರಾಘವೇಂದ್ರರಾವ್, ಪ್ರವಾಸೋದ್ಯಮ ಇಲಾಖೆಯ ಡಾ. ಸಿಂಧು ಇದ್ದರು.
ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಟಿ.ವಿ.ಎಲ್.ಎನ್. ರಾಜು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಹಿರೇಮಠ ನಿರೂಪಿಸಿದರು. ಛಾಯಾ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಸವರಾಜ್ ಭಜಂತ್ರಿ ಶಹನಾಯ್ ವಾದನ ಕಾರ್ಯಕ್ರಮ ನಡೆಯಿತು.