ಬಂಜಾರ ಸಂಘಟನೆ ವಿಸ್ತರಣೆಗೆ ಸಹಕಾರ: ಪಿಟಿಪಿ
ಕೊಟ್ಟೂರು: ಕಷ್ಟ, ಸಹಿಷ್ಣುತೆಗಳ ಪ್ರತೀಕವಾಗಿರುವ ಬಂಜಾರ ಜನಾಂಗದ ಸಂಘಟನೆ ಹೆಚ್ಚು ವಿಸ್ತಾರಗೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ತಾವು ಎಲ್ಲ ರೀತಿಯ ಸಹಕಾರ ನೀಡಲು ಸದಾ ಸಿದ್ಧನಿರುವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಶುಕ್ರವಾರ ಪಟ್ಟಣದ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಸೇವಾಲಾಲ್ ಬಂಜಾರ ಹಿತರಕ್ಷಣಾ ಸಂಘಟನೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲಂಬಾಣಿ ಜನಾಂಗಕ್ಕೆ ಯಾವುದೇ ಹಂತದಲ್ಲಿ ಕೆಟ್ಟ ಹೆಸರು ತರುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸದೇ, ಮಾದರಿ ಸಚಿವನಾಗಿ ಕಾರ್ಯನಿರ್ವಹಿಸುವ ಮೂಲಕ ಘನತೆ ಎತ್ತಿ ಹಿಡಿಯುತ್ತೇನೆ ಎಂದರು. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಪಾಲ್ಗೊಳ್ಳದೇ ಇರುವ ಬಗ್ಗೆ ಮಾತನಾಡಿದ ಅವರು, ಶಾಸಕ ಭೀಮಾನಾಯ್ಕ ಅವರು ಸಮಾವೇಶದಿಂದ ದೂರ ಸರಿದಿರುವುದು ತಮಗೆ ಖಂಡಿತಾ ಗೊತ್ತಾಗಿಲ್ಲ. ಅವರೆ ತಮಗೆ ಆಹ್ವಾನ ನೀಡಿ ಸಮಾವೇಶಕ್ಕೆ ಗೈರು ಹಾಜರಾಗಿದ್ದು ಸರಿಯಲ್ಲ ಎಂದು ಹೇಳಿದರು. ಚಾನುಕೋಟಿ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಂಜಾರ ಹಕ್ಕು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರಾಘವೇಂದ್ರ ನಾಯ್ಕ ಮಾತನಾಡಿದರು. ಸೇವಾಲಾಲ್ ಬಂಜಾರ ಹಿತರಕ್ಷಣಾ ಸಂಘದ ಅಧ್ಯಕ್ಷ ಕೊಟ್ರೇಶ್ ನಾಯ್ಕ, ವೆಂಕಟೇಶ್ ನಾಯ್ಕ, ಏರ್‌ಟೆಲ್ ಚಂದ್ರು, ಕುಬೇಂದ್ರ ನಾಯ್ಕ, ಗೋವಿಂದ ನಾಯ್ಕ, ಜಗದೀಶ್ ನಾಯ್ಕ, ಷಣ್ಮುಖ ನಾಯ್ಕ ಇದ್ದರು. ಮಲ್ಲೇಶ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.