ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಜ್ ಅಧ್ಯಯನ ಪೀಠದಿಂದ ಜ್ಞಾನ ಪಸರಿಸುವ ಕಾರ್ಯ

Lingaraj Badiger
Updated On : 28 Sept 2013, 10:51 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 27
ಶ್ರವಣ ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ. ರಾಜಕುಮಾರ್ ಅಧ್ಯಯನ ಪೀಠ ಜ್ಞಾನ ಪಸರಿಸುವ ಕೆಲಸ ಮಾಡುತ್ತಿದೆ ಎಂದು ಹಂಪಿ ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹೇಳಿದರು.
ಭಾರತೀಯ ಚಲನಚಿತ್ರ ರಂಗದ 100 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಹಂಪಿ ಕನ್ನಡ ವಿವಿಯ ಡಾ. ರಾಜಕುಮಾರ್ ಅಧ್ಯಯನ ಪೀಠ ಹಮ್ಮಿಕೊಂಡಿರುವ 3 ದಿನಗಳ ಚಲನಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೂಕ್ಷ್ಮ ಸಂವೇದನೆ: ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಕರಿಗೌಡ ಬೀಚನಹಳ್ಳಿ ಅವರು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ತಬರನ ಕತೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿ, ಸೂಕ್ಷ್ಮ ಸಂವೇದನೆ ಹಾಗೂ ವೈಚಾರಿಕ ನೆಲೆಯ ತೇಜಸ್ವಿ ಅವರ ಕತೆಗಳು ಹೇಗೆ ನವಿರಾದ ಹಾಸ್ಯದ ಮೂಲಕ ಸಮಾಜದಲ್ಲಿನ ಮೂಢನಂಬಿಕೆಗಳನ್ನು ವ್ಯಂಗ್ಯ ಮಾಡುತ್ತಿರುತ್ತವೆ ಎಂಬುದನ್ನು ವಿವರಿಸಿದರು.
ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ತೇಜಸ್ವಿ ಅವರ ಮೂಲಕತೆಗೆ ತೊಡಕುಂಟಾಗದಂತೆ ಶೇ. 90ರಷ್ಟು ಕತೆಯನ್ನು ಬಳಸಿ ಚಿತ್ರೀಕರಿಸಿರುವುದು ದೊಡ್ಡ ಸವಾಲಿನ ಸಂಗತಿ. ತೇಜಸ್ವಿ ಅವರ ಇನ್ನುಳಿದ ಕತೆ, ಕಾದಂಬರಿಗಳನ್ನು ಹೋಲಿಕೆ ಮಾಡುವ ಮೂಲಕ ತಬರನ ಕತೆ ಹೇಗೆ ಭಿನ್ನವಾದ ಸಂವೇದನೆ ಮೆರೆಯುತ್ತದೆ ಎಂಬುದರ ಕಡೆಗೆ ಗಮನ ಸೆಳೆದಿದೆ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರದ ಆಡಳಿತಶಾಹಿಯ ದಬ್ಬಾಳಿಕೆಯಲ್ಲಿ ನರಳುವ ತಬರನ ಪಿಂಚಣಿ ಪಡೆಯಲು ಹೆಣಗುವ ಬವಣೆಗಳನ್ನು ಕರಿಗೌಡರು ವಿಭಿನ್ನ ರೀತಿಯಲ್ಲಿ ವಿಶ್ಲೇಷಿಸಿದರು.
ಅನುದಾನದ ಕೊರತೆ: ಡಾ. ರಾಜಕುಮಾರ್ ಅಧ್ಯಯನ ಪೀಠದ ಸಂಚಾಲಕ ಡಾ. ಸಿ.ಆರ್. ಗೋವಿಂದರಾಜು ಮಾತನಾಡಿ, ಭಾರತೀಯ ಚಲನಚಿತ್ರರಂಗದ 100 ವರ್ಷಗಳ ಸಂಭ್ರಮದಲ್ಲಿರುವಾಗ ಪೀಠವು ವರ್ಷವಿಡಿ ಎಲ್ಲ ಭಾಷೆಗಳ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಪ್ರದರ್ಶಿಸುವಷ್ಟು ಸಮರ್ಥವಿದೆ. ಆದರೆ ಸರ್ಕಾರದ ಅನುದಾನದ ಕೊರತೆ ಇದೆ ಎಂದರು.
ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, 70ರ ದಶಕದ ಹೊಸ ಅಲೆಯ ಚಿತ್ರಗಳ ನಿರ್ಮಾಣದ ಸಾಲಿನಲ್ಲಿ ತಬರನ ಕತೆ ಚಲನಚಿತ್ರ ವಿಶಿಷ್ಟವಾದುದು. ಇಂಥ ಪ್ರಯತ್ನಕ್ಕೆ ಪಿ. ಲಂಕೇಶ್, ಚಂದ್ರಶೇಖರ ಕಂಬಾರ, ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್ ಕೈ ಹಾಕಿದ್ದು ವಿಶೇಷ ಎಂದು ಅಭಿಪ್ರಾಯಿಸಿದರು.
ರು. 15 ಲಕ್ಷ ಅನುದಾನದ ಬಡ್ಡಿಯಲ್ಲೇ ಡಾ. ರಾಜಕುಮಾರ್ ಅಧ್ಯಯನ ಪೀಠ ವರ್ಷವಿಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತಸ ತರಿಸಿದೆ. ಸರ್ಕಾರ ಪೀಠದ ಅನುದಾನದ ಕೊರತೆಯನ್ನು ಮುಂದಿನ ದಿನಗಳಲ್ಲಿ ತುಂಬಿಕೊಡಬೇಕು. ಇಂಥ ಚಲನಚಿತ್ರ ಪ್ರದರ್ಶನ ಹಾಗೂ ಸಂವಾದಗಳಿಗೆ ಇನ್ನು ಕೆಲವೇ ತಿಂಗಳಲ್ಲಿ ಬಹುಪಯೋಗಿ ಮಲ್ಟಿಪ್ಲೆಕ್ಸ್ ಕಟ್ಟಡಮೊಂದು ವಿಶ್ವವಿದ್ಯಾಲಯದಲ್ಲಿ ತಲೆ ಎತ್ತಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement