ಸರ್ಕಾರವೇ ರಾಘವ ಕಲಾಮಂದಿರ ನಿರ್ವಹಿಸಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 27
ಬಳ್ಳಾರಿಯ ರಾಘವ ಕಲಾಮಂದಿರ ನಿರ್ಮಾಣದ ವೇಳೆ ಸರ್ಕಾರ ವಿಧಿಸಿದ್ದ ನಿಬಂಧನೆಗಳನ್ನು ಸಂಪೂರ್ಣ ಗಾಳಿಗೆ ತೂರಿದ್ದು, ಕಲಾಸೇವೆ ಹಾಗೂ ಕಲಾ ಚಟವಟಿಕೆಗಳು ನಡೆಯಬೇಕಿದ್ದ ರಾಘವ ಕಲಾಮಂದಿರ ಕೇವಲ ವಾಣಿಜ್ಯ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. ಆದ್ದರಿಂದ ಇದನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರವೇ ನಿರ್ವಹಿಸಬೇಕು ಎಂದು ನಂದಿ ಸ್ವಯಂಸೇವಾ ಸಂಸ್ಥೆ ಅಧ್ಯಕ್ಷ ಮಲ್ಲಯ್ಯ ಹೆಗಡೆ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಮಕ ಕಲಾನಿಧಿ ಡಾ. ಜೋಳದರಾಶಿ ದೊಡ್ಡನಗೌಡರು ಊರೂರುಗಳಲ್ಲಿ ನಾಟಕವಾಡಿ ನಿರ್ಮಿಸಿದ ಮಂದಿರದಲ್ಲಿ ಕಲಾವಿದರಿಗೆ ಬೆಲೆಯಿಲ್ಲದಂತಾಗಿದೆ. ಕಲಾರಹಿತರು ಇದರಲ್ಲಿ ಸದಸ್ಯತ್ವ ಹೊಂದಿದ್ದಾರೆ ಎಂದು ಆರೋಪಿಸಿದರು.
ದಿನಚರಿಯಲ್ಲಿ ಉಲ್ಲೇಖವಿದೆ: ದೊಡ್ಡನಗೌಡರು ತಮ್ಮ ನಾಟಕರಂಗದ ಗುರು ಬಳ್ಳಾರಿ ರಾಘವರ ಮರಣದ ಅನಂತರ ಅವರ ಸವಿನೆನಪಿಗಾಗಿ ರಾಘವ ಸ್ಮಾರಕ ಸಮಿತಿ ಸ್ಥಾಪಿಸಿ, ಅದರ ಸಂಸ್ಥಾಪಕ ಅಧ್ಯಕ್ಷರಾದರು. ಅಂದಿನ ಹಿರಿಯರ ಶ್ರಮ ಹಾಗೂ ಅಂದಿನ ಜಿಲ್ಲಾಧಿಕಾರಿ ಅನಂತರಾಮನ್ರ ಶಿಫಾರಸಿನ ಮೇರೆಗೆ ಮದ್ರಾಸ್ ಸರ್ಕಾರ ಟಿ.ಎಸ್. ನಂಬರ್ 45/6ರಲ್ಲಿನ 0-32.2 ಸೆಂಟ್ಸ್ ನಿವೇಶನವನ್ನು ಕಲಾಭಿವೃದ್ಧಿಗಾಗಿ ಎಂಬ ನಿಬಂಧನೆ ಮೇಲೆ ರಾಘವ ಕಲಾಮಂದಿರ ನಿರ್ಮಿಸಲು ರಾಘವ ಸ್ಮಾರಕ ಸಮಿತಿಗೆ ಮಂಜೂರು ಮಾಡಿತ್ತು. ದೊಡ್ಡನಗೌಡರು ನಾಟಕವಾಡಿ ರು. 11 ಸಾವಿರ ನೀಡಿದರೆ, ಕಂಪ್ಲಿ ಸಕ್ಕರೆ ಕಾರ್ಖಾನೆ ರು. 50 ಸಾವಿರ ದೇಣಿಗೆ, ಬಳ್ಳಾರಿ ನಗರಸಭೆ, ರಾಜ್ಯ ಸರ್ಕಾರ ನೀಡಿದ ಧನಸಹಾಯದಿಂದ 1964 ಫೆಬ್ರವರಿ 16ರಂದು ಉದ್ಘಾಟಿಸಲಾಯಿತು. ಈ ಕುರಿತು ದೊಡ್ಡನಗೌಡರ ದಿನಚರಿ ಆಧಾರಿತ ಗ್ರಂಥದಲ್ಲಿ ಉಲ್ಲೇಖವಿದೆ ಎಂದು ತಿಳಿಸಿದರು.
ಒಂದೇ ಕುಟುಂಬದವರಿದ್ದಾರೆ: ರಾಘವ ಕಲಾಮಂದಿರ ಅಸ್ತಿತ್ವಕ್ಕೆ ಬಂದು 6 ದಶಕಗಳಾದರೂ, ಕೇವಲ 216 ಜನರು ಮಾತ್ರ ರಾಘವ ಮೆಮೋರಿಯಲ್ ಅಸೋಸಿಯೇಷನ್ ಸದಸ್ಯತ್ವ ಪಡೆದಿದ್ದಾರೆ. ಇದರಲ್ಲಿ ಶೇ. 60-70ರಷ್ಟು ಜನರು ಒಂದೇ ಕುಟುಂಬ ಹಾಗೂ ಒಂದೇ ಜನಾಂಗಕ್ಕೆ ಸೇರಿದ ಕಲಾವಿದರಲ್ಲದವರಾಗಿದ್ದಾರೆ. ನೂರಾರು ನಾಟಕಗಳನ್ನಾಡಿದ ನಗರದ ಖ್ಯಾತ ಕಲಾವಿದರೊಬ್ಬರಿಗೂ ಸದಸ್ಯತ್ವ ಪಡೆಯಲು ಸಾಧ್ಯವಾಗಿಲ್ಲವೆಂದರೆ ಆಡಳಿತಗಾರರ ಪ್ರಭಾವ ಎಷ್ಟಿರಬಹುದು ಎಂದು ಅವರು ಪ್ರಶ್ನಿಸಿದ ಅವರು, ಈ ಕುರಿತು ಕೇಳಿದರೆ ಉದ್ಧಟತನ ಪ್ರದರ್ಶಿಸುತ್ತಾರೆ ಎಂದು ದೂರಿದರು.
ಬಾಡಿಗೆ ನೀಡಿದ್ದಾರೆ: ಕಲಾಭಿವೃದ್ಧಿಗಾಗಿ ಜೋಳದರಾಶಿ ದೊಡ್ಡನಗೌಡರ ಶ್ರಮದ ಫಲವಾಗಿ ಸರ್ಕಾರ ನೀಡಿರುವ ನಿವೇಶನದಲ್ಲಿ ನಿರ್ಮಿಸಲ್ಪಟ್ಟ ರಾಘವ ಕಲಾಮಂದಿರ ನಿವೇಶನದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ, ಅದರಲ್ಲಿ ತಮ್ಮ ಸಂಬಂಧಿಕರಿಗೆ ಬಾಡಿಗೆ ನೀಡಲಾಗಿದೆ. ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಮದುವೆ, ಎಕ್ಜಿಬಿಷನ್, ಇತರೆ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತಿದೆ. ಮೇಲಾಗಿ ಸಭೆ, ಸಮಾರಂಭಗಳಿಗೆ ಉಪಯೋಗವಾಗುವಂತೆ ಶಾಮಿಯಾನ ಸಪ್ಲೈಯರ್ಸ್ ನಡೆಸಲು ಕೇಂದ್ರ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದೆ ಎಂದು ಆರೋಪಿಸಿದರು.
30 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಅಸೋಸಿಯೇಷನ್ನವರು ಸುಮಾರು ರು. 50 ಲಕ್ಷ ಅವ್ಯವಹಾರ ನಡೆಸಿರಬಹುದು. ಕೂಡಲೇ ಸರ್ಕಾರ ಎಚ್ಚೆತ್ತು ಕಲಾಮಂದಿರವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಸೋಸಿಯೇಷನ್ಗೆ ತಕ್ಷಣ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ನೇಮಿಸಿ, ಇಲ್ಲಿನ ವಹಿವಾಟುಗಳ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಕನ್ನಡ ಕ್ರಾಂತಿದಳ ಜಿಲ್ಲಾಧ್ಯಕ್ಷ ದರೂರು ಶಾಂತನಗೌಡ, ಸಿಂಗಾಪುರ ನಾಗರಾಜ, ವಿಷ್ಣುಸೇನಾ ಸಮಿತಿ ಜಿಲ್ಲಾಧ್ಯಕ್ಷ ಕುಂದಾಪುರ ನಾಗರಾಜ ಇದ್ದರು.