ಸುಗ್ರಿವಾಜ್ಞೆ ವಾಪಸ್ಗೆ ಕೆ.ಸಿ.ಕೊಂಡಯ್ಯ ಆಗ್ರಹ
ಬಳ್ಳಾರಿ: ಸೆ. 24ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು, ಕೂಡಲೇ ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಕಾಯ್ದೆಯ ಅನುಮೋದನೆಗಾಗಿ ರಾಷ್ಟ್ರಪತಿಗಳಿಗೆ ಕಳುಹಿಸಿದ್ದರೆ ಕೂಡಲೇ ವಾಪಸ್ ತರಿಸಿಕೊಳ್ಳಬೇಕು. ಈ ಸುಗ್ರೀವಾಜ್ಞೆ ಜಾರಿಗೆ ಬಂದಲ್ಲಿ ಅದು ಕಳಂಕಿತ ರಾಜಕಾರಣಿಗಳಿಗೆ ಸಹಾಯವಾಗುವುದೇ ವಿನಃ ಭ್ರಷ್ಟಾಚಾರದ ನಿರ್ಮೂಲನೆಯಾಗುವುದಿಲ್ಲ.
ಜು. 10ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅದರನ್ವಯ ಸಂಸದರು ಮತ್ತು ವಿಧಾನಸಭಾ ಸದಸ್ಯರಿಗೆ ಕೆಳ ನ್ಯಾಯಾಲಯಗಳಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅಂತಹ ಸದಸ್ಯರ ಸದಸ್ಯತ್ವ ತಕ್ಷಣದಿಂದಲೇ ರದ್ದಾಗುವುದು, ಕಳಂಕಿತರ ರಕ್ಷಣೆಗೆ ಎನ್ನುವಂತೆ ಸೆ. 24ರಂದು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಗೆ ಸುಗ್ರೀವಾಜ್ಞೆ ತಂದಿದೆ. ಇದರನ್ವಯ ಶಿಕ್ಷೆಗೊಳಗಾದ ಶಾಸಕ, ಸಂಸದ 90 ದಿನಗಳಲ್ಲಿ ಮೇಲಿನ ಕೋರ್ಟಿನಿಂದ ಶಿಕ್ಷೆಗೆ ತಡೆಯಾಜ್ಞೆ ತಂದರೆ ಅಂತಹವರಿಗೆ ಸುಪ್ರೀಂ ಕೋರ್ಟಿನ ತೀರ್ಪು ಅನ್ವಯವಾಗುವುದಿಲ್ಲ. ಇದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.