ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕುಸಿಯುವ ಹಂತದಲ್ಲಿ ವಾಣಿಜ್ಯ ಸಂಕೀರ್ಣ

Rashmi Kasaragodu
Updated On : 29 Sept 2013, 12:28 pm

 ಶಶಿಧರ ಮೇಟಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 28
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ನಗರದ ಮೋತಿ ವೃತ್ತದಲ್ಲಿ ನಿರ್ಮಿಸಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣ ನಿರ್ವಹಣೆ ಕೊರತೆಯಿಂದ ಶಿಥಿಲಾವಸ್ಥೆ ತಲುಪಿದೆ.
ಬೃಹದಾಕಾರದ ಸಂಕೀರ್ಣದ ಬೀಮ್ ಬಿರುಕು ಬಿಟ್ಟಿರುವುದರಿಂದ ಕಟ್ಟಡ ಕುಸಿಯುವ ಭೀತಿಯನ್ನು ವ್ಯಾಪಾರಿಗಳು, ಜನತೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ವಾಣಿಜ್ಯ ಸಂಕೀರ್ಣದಲ್ಲಿನ ಮಳಿಗೆ ಮಾಲೀಕರು, ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ಕೇವಲ 15 ವರ್ಷ: 1997-1998ರ ಅವಧಿಯಲ್ಲಿ ಲಕ್ಷಾಂತರ ವೆಚ್ಚ ಮಾಡಿ 3 ಅಂತಸ್ತುಗಳ 128 ಮಳಿಗೆಗಳ ದೊಡ್ಡದಾದ ವಾಣಿಜ್ಯ ಸಂಕೀರ್ಣವನ್ನು ಬುಡಾ ಕಟ್ಟಿಸಿದೆ. ಇದರಲ್ಲಿ ಬಹುತೇಕ ಮಳಿಗೆಗಳನ್ನು ಲೀಜ್ ಕಮ್ ಸೇಲ್ನಲ್ಲಿ ಮಾರಾಟ ಮಾಡಿದ್ದಾರೆ. ಇನ್ನು ಕೆಲ ಮಳಿಗೆಗೆಳನ್ನು ಮಾರಾಟ ಮಾಡಬೇಕಿದೆ. ಇದರಿಂದಾಗಿ ಬಹುತೇಕರು ಸಂಕೀರ್ಣದಲ್ಲಿನ ಮಳಿಗೆಗಳನ್ನು ಖರೀದಿಸಿ ಇದೀಗ ವ್ಯಥೆಪಡುವಂತಾಗಿದೆ. ಕೇವಲ 15 ವರ್ಷಗಳಲ್ಲಿ ನಿರ್ವಹಣೆ ಕೊರತೆಯಿಂದ ಇಡೀ ಕಟ್ಟಡ ಶಿಥಿಲಾವಸ್ಥೆ ತಲುಪಿದಂತಾಗಿದೆ. ಕಾರಣ ಮೂರು ಅಂತಸ್ತಿನ ಕಟ್ಟಡದಲ್ಲಿ ನೆಲಮಹಡಿಯ ಭೀಮ್ ಬಿರುಕು ಬಿಟ್ಟಿರುವುದು ಹಾಗೂ ಮೇಲ್ಛಾವಣಿಯ ಪದರ ಉದುರಿ ಬೀಳುತ್ತಿರುವುದು.
ಕಟ್ಟಡಕ್ಕೆ ಯಾವ ಹಾನಿ?: ಬಳ್ಳಾರಿಯಲ್ಲಿ ಕೆಲ ವರ್ಷಗಳಿಂದ ಹಿಂದೆ ನಿರ್ಮಾಣದ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇನ್ನು ದೇಶದಲ್ಲಿಯೇ ಕಟ್ಟಡ ದುರಂತಗಳು ಸಂಭವಿಸುವುದರಿಂದ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ. ಕಟ್ಟಡದ ನೆಲ ಮಹಡಿಯ ಬೀಮ್ ಬಿರುಕು ಬಿಡುವ ಮೂಲಕ ಅಲ್ಲಿನ ಶಾಪ್ಗಳ ಮಾಲೀಕರನ್ನು, ಅಲ್ಲಿಗೆ ಹೋಗುವ ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದೆ.
ಇನ್ನು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸಂಪರ್ಕ ಕಲ್ಪಿಸುವ ಗೋಡೆಯು 1ನೇ ಅಂತಸ್ತಿನಲ್ಲಿ ಬಿರುಕು ಬಿಟ್ಟಿದೆ. ಕಟ್ಟಡದ ಮೇಲ್ಛಾವಣಿಯ ಪದರು ಉದುರಿ ಬೀಳುತ್ತಿದೆ. ಕಟ್ಟಡದ ಮುಂದೆ ಬಂದಿರುವ ಕಾಂಕ್ರೀಟ್ ಉದುರುತ್ತಿದೆ. ಇದನ್ನು ಕಂಡ ಜನತೆ ಅಲ್ಲಿ ನಡೆದಾಡುವುದಕ್ಕೂ ಹೆದರುತ್ತಾರೆ.
ಕಟ್ಟಡ ಕುಸಿದರೆ ಹೊಣೆ ಯಾರು?: ಸಂಕೀರ್ಣದ ಎಲ್ಲ ಮಳಿಗೆಗಳು ಪೂರ್ತಿಯಾಗಿ ಇನ್ನು ಮಾರಾಟವಾಗಿಲ್ಲ. ಮಳಿಗೆ ಖರೀದಿ ಮಾಡಿದವರಿಗೆ ಕೇವಲ ತಮ್ಮ ಮಳಿಗೆಯ ನಿರ್ವಹಣೆ ಜವಾಬ್ದಾರರೋ ಅಥವಾ ಇಡೀ ವಾಣಿಜ್ಯ ಸಂಕೀರ್ಣದ ನಿರ್ವಹಣೆ ಮಾಡುವುದು ಅವರ ಹೊಣೆಯೇ? ವಾಣಿಜ್ಯ ಸಂಕೀರ್ಣ ಇದೀಗ ಯಾರ ಹೆಸರಿನ ಮೇಲಿದೆ? ಯಾರು ನಿರ್ವಹಣೆ ಮಾಡಬೇಕು? ಮಳಿಗೆಗಳನ್ನು ಮಾರಾಟ ಮಾಡುವಾಗ ಏನು ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಬುಡಾ ಅಧಿಕಾರಿಗಳೇ ಉತ್ತರಿಸಬೇಕು.
ಮಳಿಗೆ ಮಾಲೀಕರ ಮೇಲೆ ಬುಡಾ ಅಧಿಕಾರಿಗಳು, ಬುಡಾ ಅಧಿಕಾರಿಗಳ ಮೇಲೆ ಮಳಿಗೆಯವರು ನಿರ್ವಹಣೆ ಜವಾಬ್ದಾರಿ ಹಾಕುತ್ತಿದ್ದಾರೆ. ಆದರೆ ಕಟ್ಟಡ ಕುಸಿದು ದುರಂತ ಸಂಭವಿಸಿದರೆ ಯಾರು ಹೊಣೆ? ಒಬ್ಬರ ಮೇಲೆ ಒಬ್ಬರ ಹೇಳಿಕೊಂಡು ಸಂಕೀರ್ಣದ ನಿರ್ವಹಣೆ ಇಲ್ಲದೇ ಹೋಗಿದೆ. ಇನ್ನು ಸಂಕೀರ್ಣದಲ್ಲಿ ಸ್ವಚ್ಛತೆ ಎಂಬ ಪದಕ್ಕೆ ಅರ್ಥವೇ ಇಲ್ಲ. 1 ಮತ್ತು ಎರಡನೇ ಅಂತಸ್ತಿನಲ್ಲಿ ಕಸದ ರಾಶಿಯೇ ತುಂಬಿದೆ.
ಎಚ್ಚೆತ್ತುಕೊಳ್ಳಿ: ಕಟ್ಟಡ ಹೀಗೆ ಸಂಪೂರ್ಣ ಶಿಥಿಲಾವಸ್ಥೆ ತಲುಪುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ದುರಂತ ಸಂಭವಿಸಿದಾಗ ಎಚ್ಚೆತ್ತುಕೊಳ್ಳುವುದು ಬಿಟ್ಟು, ದುರಂತ ಸಂಭವಿಸುವ ಪೂರ್ವದಲ್ಲಿ ನಿರ್ವಹಣೆ ನಿರ್ವಹಿಸಿದರೆ ಮುಂದಾಗುವ ಅನಾಹುತ ತಪ್ಪಿಸಬಹುದು. ಸಂಕೀರ್ಣದಲ್ಲಿ ಹೋಟೆಲ್, ಸರ್ಕಾರಿ ಇಲಾಖೆಗಳ ಕಚೇರಿ, ಬೇಕರಿ ಸೇರಿದಂತೆ ಬೇರೆ ಬೇರೆ ವ್ಯಾಪಾರ ವಹಿವಾಟು ನಡೆಯುತ್ತಿದೆ.
ನೂರಾರು ವ್ಯಾಪಾರಿಗಳು ವ್ಯವಹರಿಸುತ್ತಿದ್ದರೆ, ಇಲ್ಲಿಗೆ ಸಾವಿರಾರು ಸಾರ್ವಜನಿಕರು ಖರೀದಿಗೆ ಬರುತ್ತಾರೆ. ಶೀಘ್ರದಲ್ಲೇ ನಿರ್ವಹಣೆ ಕುರಿತು ಎಚ್ಚೆತ್ತುಕೊಳ್ಳುವುದು ಉತ್ತಮ ಎನ್ನುವುದು ಮಳಿಗೆ ಮಾಲೀಕರು ಹಾಗೂ ಸಾರ್ವಜನಿಕರ ಒತ್ತಾಯ. ಇದು 'ಕನ್ನಡಪ್ರಭ'ದ ಕಳಕಳಿಯೂ ಕೂಡ.


ಈಗಾಗಲೇ ಸಂಕೀರ್ಣದ ಮಳಿಗೆಗಳನ್ನು ಮಾರಾಟ ಮಾಡಿರುವುದರಿಂದ ಕಟ್ಟಡದ ನಿರ್ವಹಣೆ ಮಳಿಗೆ ಖರೀದಿಸಿದವರಿಗೆ ಸಂಬಂಧಿಸಿದೆ. ಮಳಿಗೆ ಖರೀದಿ ಮಾಡಿದವರು ಒಟ್ಟಾಗಿ ಸೇರಿ ನಿರ್ವಹಣೆ ಮಾಡಬೇಕು.
- ರವಿಶಂಕರ್, ಬುಡಾ ಎಂಜಿನಿಯರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement