ಪಡಿತರಕ್ಕೆ ತಪ್ಪಿಲ್ಲ ಪರದಾಟ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 28
ಜನರಲ್ಲಿ ನಿರೀಕ್ಷೆ ಮೂಡಿಸಿದ್ದ ಕಾಂಗ್ರೆಸ್ ಸರ್ಕಾರದ ಮಹತ್ವದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಪಡೆಯಲು ಫಲಾನುಭವಿಗಳ ಪರದಾಟ ಇನ್ನು ತಪ್ಪಿಲ್ಲ...
ಹೌದು, ಪಟ್ಟಣದ ಟಿಎಪಿಸಿಎಂಎಸ್ನ ಪ್ರಸಕ್ತ ತಿಂಗಳ ಹಂಚಿಕೆಯ ಪಡಿತರ ಧಾನ್ಯ ಪೂರ್ಣ ಖಾಲಿಯಾದ ಪರಿಣಾಮ ಪಡಿತರ ಆಹಾರ ಧಾನ್ಯ ದೊರೆಯದೆ ನೂರಾರು ಫಲಾನುಭವಿಗಳು ಇಲ್ಲಿನ ನ್ಯಾಯಬೆಲೆ ಅಂಗಡಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.
ಸೆಪ್ಟೆಂಬರ್ ತಿಂಗಳ ಪಡಿತರ ಪಡೆಯಲು ಬಂದಿದ್ದ ಕಾರ್ಡ್ದಾರರಿಗೆ ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಈ ತಿಂಗಳ ಪೂರೈಕೆಯ ಆಹಾರ ಧಾನ್ಯ ಖಾಲಿಯಾಗಿದೆ ಎಂದು ಹೇಳಿದಾಗ, ಸಿಬ್ಬಂದಿ ವಿರುದ್ಧ ಪ್ರತಿಭಟನೆ ಮಾಡಿ ಇಲಾಖೆ ನೀಡಿದ ಅರ್ಹ ಪಡಿತರ ಕಾರ್ಡ್ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ನಾವು ಈ ತಿಂಗಳ ಪಡಿತರ ಧಾನ್ಯ ಪಡೆದಿಲ್ಲ. ಹಾಗಾದರೆ ನಮಗೆ ಸಿಗಬೇಕಿದ್ದ ಅಕ್ಕಿ, ಗೋದಿ ಎಲ್ಲಿ ಹೋಗಿವೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಕಾಳಸಂತೆಗೆ ಅಕ್ಕಿ: ಇಲ್ಲಿನ ನ್ಯಾಯಬೆಲೆ ಅಂಗಡಿಯಲ್ಲಿ ಪ್ರತಿ ತಿಂಗಳು ಈ ರೀತಿ ಅವ್ಯವಹಾರ ನಡೆಯುತ್ತದೆ. ಕೇವಲ 3-4 ದಿನಗಳ ಕಾಲ ಅಕ್ಕಿ ವಿತರಿಸಿ ನಂತರ ಬಂದ ಫಲಾನುಭವಿಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ. ಸರ್ಕಾರ ಮತ್ತು ಫಲಾನುಭವಿಗಳನ್ನು ಸಿಬ್ಬಂದಿ ವಂಚಿಸುತ್ತಿದ್ದಾರೆ. ಪ್ರತಿ ತಿಂಗಳು ಈ ಕೇಂದ್ರದ ನೂರಾರು ಕ್ವಿಂಟಲ್ ಪಡಿತರ ಧಾನ್ಯ ಕಾಳಸಂತೆಗೆ ಹೋಗುತ್ತಿದೆ. ಸೊಸೈಟಿ ಆವರಣದಲ್ಲೇ ಅಕ್ಕಿ ಮಾರಾಟ ದಂಧೆ ನಡೆಸುತ್ತಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿಗಳವರ ಹೊಂದಾಣಿಕೆಯಿಂದ ಪ್ರತಿ ತಿಂಗಳ ಅಕ್ಕಿ ದುರುಪಯೋಗವಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಯುವ ಮುಖಂಡ ಪುತ್ರೇಶ್, ಕೋಡಿಹಳ್ಳಿ ಮಲ್ಲಿಕಾರ್ಜುನ, ದುರುಗೇಶ್ ಇತರರು ಆಗ್ರಹಿಸಿದರು.
ಸ್ಥಳಕ್ಕೆ ಆಹಾರ ನಿರೀಕ್ಷಕ ಜಿ.ಆರ್. ಜಾಡರ್, ಶಿರಸ್ತೇದಾರ ಮರುಳಸಿದ್ದಯ್ಯ ಭೇಟಿ ನೀಡಿ, ಈ ನ್ಯಾಯಬೆಲೆ ಅಂಗಡಿಯಲ್ಲಿ 1,436 ಬಿಪಿಎಲ್ ಮತ್ತು 346 ಅನ್ನ ಅಂತ್ಯೋದಯ ಕಾರ್ಡ್ಗಳನ್ನು ವಿತರಿಸಲಾಗಿದೆ. 436.40 ಕ್ವಿಂಟಲ್ ಅಕ್ಕಿ ಮತ್ತು 86.65 ಕ್ವಿಂಟಲ್ ಗೋದಿಯನ್ನು ಸೆಪ್ಟೆಂಬರ್ ತಿಂಗಳಿಗೆ ಹಂಚಿಕೆಗಾಗಿ ನೀಡಲಾಗಿದೆ. ಆದರೂ 150 ಫಲಾನುಭವಿಗಳಿಗೆ ಪಡಿತರ ಧಾನ್ಯ ಕಡಿಮೆಯಾಗಿದ್ದ ದಾಖಲೆಗಳನ್ನು ಪರಿಶೀಲಿಸಿ ಎಲ್ಲ ಫಲಾನುಭವಿಗಳಿಗೆ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಧಾನಪಡಿಸಿದರು.