ಕಬ್ಬು ಬೆಳೆಗಾರರ, ಕಾರ್ಖಾನೆ ಪ್ರತಿನಿಧಿಗಳ ಸಭೆ
ಬಳ್ಳಾರಿ: ಕಬ್ಬಿನ ಬೆಲೆ ನಿಗದಿ ಹಾಗೂ ಹೊಸಪೇಟೆ ಐಎಸ್ಆರ್ ಸಕ್ಕರೆ ಕಾರ್ಖಾನೆ ಆರಂಭದ ಕುರಿತಾಗಿ ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆ ಪ್ರತಿನಿಧಿಗಳ ಸಭೆ ಭಾನುವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆಯಿತು.
ರೈತರ ಪ್ರತಿನಿಧಿಯಾಗಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಹೊಸಪೇಟೆ ಕಬ್ಬು ಬೆಳೆಗಾರ ರೈತರು ಮಾತನಾಡಿ, ನಾಲ್ಕು ವರ್ಷಗಳಿಂದ ಐಎಸ್ಆರ್ ಕಾರ್ಖಾನೆ ರೈತರಿಗೆ ಬಾಕಿ ಹಣ ನೀಡಬೇಕಾಗಿದೆ. ಅದನ್ನು ನೀಡಿದರೆ ಮಾತ್ರ ಕಬ್ಬು ನೀಡಲಾಗುತ್ತದೆ ಎಂದು ವಾದಿಸಿದರು.
2003-04ರ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದ್ದರೂ, ರು. 70 ಕಡಿಮೆ ನೀಡಿರುವುದು ಪ್ರತಿ ಟನ್ಗೆ ರು. 70 ಬಾಕಿ ಹಣ ನೀಡಬೇಕು. ಇನ್ನು ಎರಡು ವರ್ಷಗಳ ಅವಧಿಯಲ್ಲಿ ರು. 1140 ಬೆಂಬಲ ಬೆಲೆ ಘೋಷಣೆ ಮಾಡಿದ್ದರೂ, ಕೇವಲ ರು. 1000 ನೀಡಿರುವುದರಿಂದ ಇನ್ನುಳಿದ ಬಾಕಿ ರು. 140 ನೀಡಬೇಕೆಂದು ಒತ್ತಾಯಿಸಿದರು. ಬಾಕಿ ಹಣದ ಕುರಿತು ಹೈಕೋರ್ಟ್ ವಿಚಾರಣೆ ನಡೆಸಿ ಪ್ರಕರಣವನ್ನು ಶುಗರ್ ಕಮೀಷನ್ಗೆ ನೀಡಿದ್ದು, ಅ. 5ರಂದು ಅಂತಿಮ ತೀರ್ಪು ಹೊರಬರಲಿದೆ. ಸಭೆಯಲ್ಲಿ ಕಾರ್ಖಾನೆ ಪ್ರತಿನಿಧಿಗಳು, ರೈತ ಗೋಸಲ ಭರ್ಮಪ್ಪ, ಹುಲುಗಪ್ಪ, ಕಿಚಿಡಿ ಲಕ್ಷ್ಮಣ, ನಾರಾಯಣ ಸಿಂಗ್ ಸೇರಿದಂತೆ ಇತರರು ಇದ್ದರು.