ಕೊಟ್ಟೂರು: ಯಾತ್ರಿ ನಿವಾಸ ಕಾಮಗಾರಿಗೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಸೆ. 29
ಉಜ್ಜಿನಿ ಸದ್ಧರ್ಮ ಪೀಠದ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ರು. 60 ಲಕ್ಷ ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಮುಂದಾಗಿದೆ. ಉಜ್ಜಿನಿಯಲ್ಲಿ ಯಾತ್ರಿ ನಿವಾಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಭೂಮಿಪೂಜೆ ನೆರವೇರಿಸಿದರು. 8 ಸುಸಜ್ಜಿತ ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದ್ದು, ಕಾಮಗಾರಿ ನಿರ್ವಹಣೆಯನ್ನು ಕೆಆರ್ಐಡಿಎಲ್ (ಭೂಸೇನಾ ನಿಗಮ) ಹೊತ್ತುಕೊಂಡಿದೆ. ಭೂಮಿಪೂಜೆಯ ಸರಳ ಸಮಾರಂಭದಲ್ಲಿ ಕೂಡ್ಲಿಗಿ ಶಾಸಕ ಬಿ. ನಾಗೇಂದ್ರ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎಂ.ಜೆ. ಹರ್ಷವರ್ಧನ್, ಜಿಪಂ ಸದಸ್ಯರಾದ ಕೆ.ಎಂ. ಶಶಿಧರ, ಶಾರದಾ ಪ್ರಸಾದ್, ತಾಲೂಕು ಪಂಚಾಯಿತಿ ಸದಸ್ಯ ಬಸವರಾಜಪ್ಪ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.