ಜಿಪಂ ಮರುಚುನಾವಣೆ ಶಾಂತಿಯುತ
ಸಂಡೂರು: ಚೋರನೂರು ಜಿಪಂ ಕ್ಷೇತ್ರದ ಸದಸ್ಯ ಭೀಮಾನಾಯ್ಕ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ತೆರವಾಗಿರುವ ಸದಸ್ಯರ ಸ್ಥಾನಕ್ಕೆ ಭಾನುವಾರ ಮರುಚುನಾವಣೆ ನಡೆಯಿತು. ಮರು ಚುನಾವಣೆಯಲ್ಲಿ ಅಹಿತಕರ ಘಟನೆ ವರದಿಯಾಗಿಲ್ಲ. ಶೇ. 65.9 ಮತದಾನವಾಗಿದ್ದು, ಅಂಕಮನಾಳದಲ್ಲಿ ಗರಿಷ್ಠ ಶೇ. 84, ಅಟ್ಟೋಕೆನಳ್ಳಿಯಲ್ಲಿ ಕನಿಷ್ಠ ಶೇ. 44ರಷ್ಟಾಗಿದೆ. ಚೋರನೂರು ಜಿಪಂ ಸದಸ್ಯ ಭೀಮನಾಯ್ಕ ಅವರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರಿಂದ ಚೋರನೂರು ಕ್ಷೇತ್ರ ತೆರವಾಗಿತ್ತು. ಭಾನುವಾರ ನಡೆದ ಮರು ಚುನಾವಣೆಗೆಯಲ್ಲಿ ಕ್ಷೇತ್ರದಲ್ಲಿ 23,423 ಮತದಾರರಿದ್ದು, ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ನಡೆದಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಈ ಹಿಂದೆ ಕಾಂಗ್ರೆಸ್ ಪಕ್ಷದ ಸದಸ್ಯರಿದ್ದು, ಇದೀಗ ಯಾರ ಪಾಲಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದನ್ನು ಕಾದುನೋಡಬೇಕಾಗಿದೆ.