ನಾಡಕಚೇರಿಗಳಿಗೆ ಏಕರೂಪ ಪದ್ಧತಿ ಅಳವಡಿಸಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಸೆ. 29
ನಾಡಕಚೇರಿಗಳಿಗೆ ರಾಜ್ಯಾದ್ಯಂತ ಏಕರೂಪ ಪದ್ಧತಿ ಅಳವಡಿಸಬೇಕು. ನಾಡಕಚೇರಿಗಳ ಮೂಲಕವೇ ಎಲ್ಲ ಪತ್ರ ವ್ಯವಹಾರಗಳು ನಡೆಯಬೇಕು ಎನ್ನುವುದು ಕಂದಾಯ ಇಲಾಖೆಯ ನೌಕರರ ಬೇಡಿಕೆಯಾಗಿದ್ದು, ಈಗಾಗಲೇ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್. ಶಿವಣ್ಣ ಹೇಳಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ನೌಕರರ ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಯೊಂದು ಹೋಬಳಿಗಳಲ್ಲಿ ನಾಡಕಚೇರಿ ತೆರೆದು ಉತ್ತಮ ಕಟ್ಟಡ ಸೇರಿದಂತೆ ಕಚೇರಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಕಂದಾಯ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗಳಿಗೆ ಅಗತ್ಯ ಸಿಬ್ಬಂದಿ ಪೂರೈಸಿಕೊಡಬೇಕು. ಕಂದಾಯ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸೇವೆಗೆ ಅನುಗುಣವಾಗಿ ಬಡ್ತಿ ನೀಡಬೇಕು. ಅಥವಾ ಅವರ ಹುದ್ದೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಭತ್ಯೆ ನೀಡಿ: ಚುನಾವಣಾ ಸಂದರ್ಭದಲ್ಲಿ ಬೇರೆ ಇಲಾಖೆಗಳನ್ನು ಬಳಸಿಕೊಂಡರೆ ಅವರಿಗೆ ಇಂತಿಷ್ಟು ಹಣ ಎಂದು ನೀಡುತ್ತಾರೆ. ಆದರೆ ಕಂದಾಯ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ತಿಂಗಳ ಕಾಲ ಕೆಲಸ ಮಾಡಿದರೂ ಒಂದು ರುಪಾಯಿ ಸಹ ನೀಡುತ್ತಿಲ್ಲ. ಚುನಾವಣೆಯಲ್ಲಿ ಬೇರೆ ಇಲಾಖೆಗಳು ಕೆಲಸ ಮಾಡಿದಾಗ ಭತ್ಯೆ ನೀಡುವಂತೆ ನಮಗೂ ತಿಂಗಳ ಸಂಬಳ ಹೆಚ್ಚಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಅಹಾರ ಇಲಾಖೆಗೆ ಕೆಲಸ ನೀಡಿ: ಪಡಿತರ ಚೀಟಿ ವಿತರಣೆ, ಪಡಿತರ ಚೀಟಿ ಸರ್ವೇ ಕಾರ್ಯವನ್ನು ಕಂದಾಯ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಬಾರದು. ಆಹಾರ ಇಲಾಖೆ ಕಾರ್ಯಗಳನ್ನು ಆಹಾರ ಇಲಾಖೆಯವರೆ ವಹಿಸಿಕೊಳ್ಳಬೇಕು. ಗ್ರಾಮದ ನೀಲನಕ್ಷೆ ತಯಾರಿಸುವ ಕೆಲಸ, ವಂಶವೃಕ್ಷ ನೀಡುವುದನ್ನು ಕಂದಾಯ ಇಲಾಖೆಗೆ ವಹಿಸಬಾರದು. ಗ್ರಾಮ ಲೆಕ್ಕಾಧಿಕಾರಿಗಳಿಗೆ ಮುಂಬಡ್ತಿ ನೀಡಬೇಕು ಎನ್ನುವ ಬೇಡಿಕೆಗಳನ್ನು ಜಿಲ್ಲಾ ಮಟ್ಟದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಪದಾಧಿಕಾರಿಗಳ ಆಯ್ಕೆ: ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಹೊಸಪೇಟೆ ತಹಸೀಲ್ದಾರ್ ಕಚೇರಿ ನೌಕರ ಕೆ. ರಾಘವೇಂದ್ರರಾವ್, ಕುರುಗೋಡಿನ ತಹಸೀಲ್ದಾರ್ ಕಚೇರಿ ನೌಕರ ಎಚ್. ವಿಶ್ವನಾಥ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಗ್ರಾಮ ಲೆಕ್ಕಾಧಿಕಾರಿಗಳ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಸಿರುಗುಪ್ಪ ತಾಲೂಕಿನ ಅಂದಾನಗೌಡ ಆಯ್ಕೆಯಾದರೆ, ಬಳ್ಳಾರಿ ಗ್ರಾಮೀಣದಿಂದ ಬಿ. ವೀರೇಶ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕಂದಾಯ ಇಲಾಖೆಯ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣಮೂರ್ತಿ ನೇಮಕವಾಗಿದ್ದಾರೆ ಎಂದರು.
ಗ್ರಾಮ ಲೆಕ್ಕಾಧಿಕಾರಿಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಜಯರಾಂ, ಕಂದಾಯ ಇಲಾಖೆ ನೌಕರರ ಸಂಘದ ಮುಖಂಡ ಯು. ನಾಗರಾಜ್, ಕೆ. ರಾಘವೇಂದ್ರರಾವ್, ಗುರುಬಸವರಾಜ ಇತರರು ಇದ್ದರು.