ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸುದ್ದಿ ಸಂಕ್ಷೇಪ

Mainashree
Updated On : 30 Sept 2013, 11:10 am

ಅಮೂ ಹೇಳಿಕೆ: ಇಂದು ಪ್ರತಿಭಟನೆ
ಹೊಸಪೇಟೆ: ಬ್ರಾಹ್ಮಣರಲ್ಲಿ ಗೋಮಾಂಸ ಸೇವಿಸುವ ಪರಿಪಾಠವಿತ್ತು ಎಂಬ ಹೇಳಿಕೆ ನೀಡಿರುವ ಜ್ಞಾನಪೀಠ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಹೇಳಿಕೆ ವಿರುದ್ಧ ನಗರದಲ್ಲಿ ಸೆ. 30ರಂದು ತಾಲೂಕು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಬ್ರಾಹ್ಮಣರು ಗೋಹತ್ಯೆ ಮಾಡಿ ಗೋಮಾಂಸ ಭಕ್ಷಿಸುತ್ತಿದ್ದರು ಎನ್ನುವುದು ಶುದ್ಧ ಸುಳ್ಳು. ವೇದೋಪನಿಷತ್, ಪುರಾಣಗಳಲ್ಲೂ ಇದನ್ನು ಸೂಚಿಸಿರುವುದಿಲ್ಲ ಹಾಗೂ ಆಧಾರವಿರುವುದಿಲ್ಲ. ಗೋವುಗಳಿಗೆ ಮಾತೃಸ್ಥಾನ ಕಲ್ಪಿಸಿರುವ ಹಿಂದೂ ಧರ್ಮ ಗ್ರಂಥಗಳು ಗೋಹತ್ಯೆ ಪ್ರೇರೇಪಿಸಲು ಸಾಧ್ಯವೇ ಇಲ್ಲ. ವೇದಮಂತ್ರಗಳಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ವಿಶೇಷ ಅರ್ಥಗಳಿವೆ. ಆದರೆ ಡಾ. ಯು.ಆರ್.  ಅನಂತಮೂರ್ತಿ ಅವರ ಕಪೋಲಕಲ್ಪಿತ ಹೇಳಿಕೆಯನ್ನು ಖಂಡಿಸಲಾಗಿದೆ.
ಅನಂತಮೂರ್ತಿ ಅವರಿಗೆ ಸಿಕ್ಕಿದ್ದು ಜ್ಞಾನಪೀಠ ಪ್ರಶಸ್ತಿಯೇ ಹೊರತೂ ಸರ್ವಜ್ಞ ಪ್ರಶಸ್ತಿ ಅಲ್ಲ. ಎಲ್ಲ ಹಿಂದೂ ಧರ್ಮಾನುಯಾಯಿಗಳಿಗೂ ಅನಂತಮೂರ್ತಿ ಅವರ ಹೇಳಿಕೆ ನೋವುಂಟು ಮಾಡಿದೆ. ಹೇಳಿಕೆ ಮೂಲಕ ಬ್ರಾಹ್ಮಣ ಸಮುದಾಯಕ್ಕೆ ಬೇಸರ ತಂದಿದ್ದು, ಇಂತಹ ವಿವಾದಿತ ಹೇಳಿಕೆಯಿಂದ ಅವರಿಗೆ ಬೇರೆ ತರಹದ ಅಧಿಕಾರ ಸಿಗುವ ಆಸೆ ಏನಾದರು ಇದೆಯೇ? ಅವರು ಸಹವಾಸ ದೋಷದಿಂದ ಅವರ ಪದ್ಧತಿಯನ್ನು ಸಮಾಜದ ಮೇಲೆ ಹೇರುವುದು ಎಷ್ಟು ಅನಿಷ್ಟಕಾರಕ? ಅಪ್ರಸ್ತುತ ಹೇಳಿಕೆಯಿಂದ ಇಡೀ ಬ್ರಾಹ್ಮಣ ಸಮುದಾಯವು ಅವಮಾನಗೊಂಡು ಅಕ್ರೋಶ ವ್ಯಕ್ತಪಡಿಸುತ್ತಿದೆ ಎಂದು ಸಂಘ ಹೇಳಿದೆ.
ಪ್ರತಿಯೊಂದು ವಿಷಯದಲ್ಲೂ ಸಹ ಬ್ರಾಹ್ಮಣ ಸಮಾಜ ತುಳಿತಕ್ಕೊಳಗಾಗಿದೆ. ಈ ಸಮಾಜಕ್ಕೆ ಹಗುರವಾಗಿ ಮಾತನಾಡಿದರೆ ನಡೆಯುತ್ತದೆ ಎಂಬ ಮನೋಭಾವನೆ ಇತ್ತೀಚಿಗೆ ಹೆಚ್ಚುತ್ತಿದೆ. ಆದರೆ ಬ್ರಾಹ್ಮಣ ಸಮಾಜ ಶಾಸ್ತ್ರ ಹೇಳಲು ಬದ್ಧ ಹಾಗೂ ಪ್ರತಿಭಟನೆಗೂ ಸಿದ್ಧ ಎನ್ನುವಂತೆ ಸಮಾಜ ಎಚ್ಚೆತ್ತುಕೊಂಡು ಉಗ್ರ ಹೋರಾಟ ಹಮ್ಮಿಕೊಳ್ಳಲಾಗಿದೆ. ಅನಂತಮೂರ್ತಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಹೊಸಪೇಟೆ ಬ್ರಾಹ್ಮಣ ಸಂಘ, ತಾಲೂಕು ಬ್ರಾಹ್ಮಣ ಯುವ ವೇದಿಕೆ ಮತ್ತು ಆಚಾರ್ಯ ಚಾಣಕ್ಯ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸರ್ವವಿಪ್ರ ಬಾಂಧವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement