ಕುಂಟುತ್ತಿದೆ ಕುಡುಗೋಲುಮಟ್ಟಿ ಯೋಜನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಸೆ. 30
ತುಂಗಭದ್ರೆ ತಟದ ತಾಲೂಕಿನ ಅಂಗೂರು ಬಳಿ ನಿರ್ಮಾಣಗೊಂಡ ಕುಡುಗೋಲುಮಟ್ಟಿ ಏತನೀರಾವರಿ ಯೋಜನೆ ಉದ್ಘಾಟನೆಯಾಗಿ ವರ್ಷ ಕಳೆದರೂ ರೈತರ ಖುಷ್ಕಿ ಜಮೀನುಗಳಿಗೆ ನೀರುಣಿಸುವ ಭಾಗ್ಯ ಬಂದಿಲ್ಲ.
ಹೌದು, ಸಿಂಗಟಾಲೂರು ಏತನೀರಾವರಿ ಯೋಜನೆ ಲೋಕಾರ್ಪಣೆಯಾದ ಸೆ. 4, 2012ರಂದು ಅಂದಿನ ಸಿಎಂ ಜಗದೀಶ ಶೆಟ್ಟರ್, ಸಣ್ಣ ನೀರಾವರಿ ಮಂತ್ರಿ ಗೋವಿಂದ ಕಾರಜೋಳ ಇತರ ಮಂತ್ರಿಗಳ ಸಮ್ಮುಖದಲ್ಲಿ ಈ ಕುಡುಗೋಲು ಮಟ್ಟಿ ಏತನೀರಾವರಿ ಯೋಜನೆ ಉದ್ಘಾಟನೆ ಮಾಡಲಾಗಿತ್ತು. ಈ ಯೋಜನೆಗೆ 2008ರಲ್ಲಿ ಅಂದಾಜು ರು. 7 ಕೋಟಿ ಕ್ರಿಯಾಯೋಜನೆ ರೂಪಿಸಿ ಹಣ ಮಂಜೂರಾಗಿತ್ತು.
ತದನಂತರ 2012ರ ಹೊತ್ತಿಗೆ ರು. 12 ಕೋಟಿ ಅನುದಾನದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಯಿತು. ಈ ಯೋಜನೆಯಿಂದ ತಾಲೂಕಿನ ಅಂಗೂರು, ಬೀರಬ್ಬಿ, ಕೋಟಿಹಾಳು, ಕಾಂತೆಬೆನ್ನೂರು ಗ್ರಾಮಗಳು ಸೇರಿದಂತೆ 2500 ಎಕರೆ ಖುಷ್ಕಿ ಜಮೀನಿಗೆ ನೀರುಣಿಸಲಿದೆ.
ಕಾಮಗಾರಿ ಅಪೂರ್ಣಗೊಂಡಿದ್ದರೂ ತರಾತುರಿಯಲ್ಲಿ ಉದ್ಘಾಟನೆಯಾಗಿದೆ. ಯೋಜನೆಗೆ ವಿದ್ಯುತ್ ಸಂಪರ್ಕ ಮಾಡಿ, ಸ್ವೀಚ್‌ಗೇರ್ ಅಳವಡಿಸಿದ ನಂತರದಲ್ಲಿ ಸ್ವೀಚ್‌ಗೇರ್ ಕುರಿತು ಇಲಾಖೆಯಲ್ಲಿ ಟೆಂಡರ್ ಕರೆದಿದ್ದಾರೆ. ರೈಜಿಂಗ್ ಮೇನ್‌ನಲ್ಲಿ ಸೋರಿಕೆಯಾಗುತ್ತಿರುವುದರಿಂದ ರೈತರಿಗೆ ಈ ವರೆಗೂ ನೀರಾವರಿ ಸೌಲಭ್ಯ ಇಲ್ಲದಾಗಿದೆ.
ಪರಿಹಾರ ಇಲ್ಲವೇ ಇಲ್ಲ: ಯೋಜನೆಗೆ ಅಗತ್ಯವಿರುವ ಕಾಲುವೆ ನಿರ್ಮಾಣಕ್ಕಾಗಿ 15 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳದೇ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ರೈತರ ಜಮೀನಿನಲ್ಲಿ ಗುತ್ತಿಗೆದಾರರು ಕಾಲುವೆ ನಿರ್ಮಾಣ ಮಾಡಿದ್ದಾರೆ. ಸಂಬಂಧಪಟ್ಟ ರೈತರಿಗೆ ಈ ವರೆಗೂ ಭೂಸ್ವಾಧೀನ ಕುರಿತು 4 (1), 6 (1) ನೋಟಿಸ್ ನೀಡಿಲ್ಲ. ತಮಗೆ ತಿಳಿದ ಕಡೆಗಳಲ್ಲಿ ಕಾಲುವೆ ನಿರ್ಮಾಣ ಮಾಡಿಕೊಂಡು ಹೋಗಿದ್ದಾರೆ ಎಂಬ ಆರೋಪ ರೈತರಿಂದ ಕೇಳಿ ಬರುತ್ತಿದೆ.
ರೈತರಿಗೆ ಪರಿಹಾರ ನೀಡದೆ ಕಾಮಗಾರಿ ಆರಂಭಿಸುವುದು ಅಪರಾಧ, ಈ ವರೆಗೂ ಕಂದಾಯ, ಹೊಸಪೇಟೆ ಆಯುಕ್ತರ ಇಲಾಖೆ, ಸಣ್ಣ ನೀರಾವರಿ, ಭೂಮಾಪನ, ರೈತರು ಸೇರಿದಂತೆ ಜಂಟಿ ಸರ್ವೇ ಮಾಡಿಲ್ಲ. ಸಣ್ಣ ನೀರಾವರಿ ಇಲಾಖೆಯಿಂದ ಅನಧಿಕೃತ ನೋಟಿಸ್‌ವೊಂದನ್ನು ರೈತರಿಗೆ ನೀಡಿ ಕಾಲುವೆ ನಿರ್ಮಾಣ ಮಾಡಿದ್ದಾರೆಂಬ ದೂರುಗಳಿವೆ.
ಧೂಳು ತಿನ್ನುತ್ತಿವೆ ದಾಖಲೆ: ಕಾಲುವೆ ಕಾಮಗಾರಿ ನಿರ್ಮಾಣಕ್ಕಾಗಿ 15 ಎಕರೆ ಜಮೀನು ಭೂಸ್ವಾಧೀನಕ್ಕಾಗಿ ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿಗೆ ಕಳುಹಿಸಿ 3-4 ವರ್ಷ ಕಳೆದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಅತ್ತ ಭೂಸ್ವಾಧೀನ ಪ್ರಕ್ರಿಯೆಯನ್ನು ಮಾಡದ ಕಾರಣ ಹೊಸಪೇಟೆ ಆಯುಕ್ತರ ಕಚೇರಿಯಲ್ಲಿ ದಾಖಲೆಗಳು ಧೂಳು ತಿನ್ನುತ್ತಿವೆ.
ಅಗತ್ಯವಿರುವ ಭೂಸ್ವಾಧೀನ ಪಡಿಸಿಕೊಳ್ಳಲು ಸೆ. 15, 2008ರಲ್ಲಿ ಹೊಸಪೇಟೆ ಸಹಾಯಕ ಆಯುಕ್ತರ ಕಚೇರಿಗೆ ಅವಾರ್ಡ್‌ಗಾಗಿ ಕಳಿಸಲಾಗಿತ್ತು. ನಂತರದಲ್ಲಿ ಕಾಲುವೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ರು. 30 ಲಕ್ಷ ಮಾರ್ಚ್ 12, 2009ರಲ್ಲೇ ಠೇವಣಿ ಇಡಲಾಗಿದೆ. ಆದರೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ರೈತರಿಗೆ ಈ ವರೆಗೂ ಪರಿಹಾರ ನೀಡುವ ಗೋಜಿಗೆ ಹೋಗಿಲ್ಲ.
ಈಗಾಗಲೇ ರೈಸಿಂಗ್ ಮೇನ್‌ನಿಂದ 800 ಮಿ.ಮೀ. ಪಿಎಸ್ಪಿ (1ನೇ ಹಂತ) 900 ಮಿ.ಮೀ. (2ನೇ ಹಂತ) ಪೈಪ್‌ಲೈನ್ ಅಳವಡಿಸಿ, 1.11 ಕ್ಯುಸೆಕ್ ಉದ್ದೇಶಿತ ನೀರಿನ ಹರಿವನ್ನು ಯೋಜನೆ ಹೊಂದಿದೆ. ರೈತರಿಗೆ ಪರಿಹಾರಕ್ಕಾಗಿ ಎಸಿ ಕಚೇರಿಯಲ್ಲಿ ರು. 30 ಲಕ್ಷ ಠೇವಣಿ ಇದೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಮಾತ್ರ ಆರಂಭವಾಗಿಲ್ಲ ಎನ್ನುತ್ತಾರೆ ಸಣ್ಣ ನೀರಾವರಿ ಸಹಾಯಕ ಅಭಿಯಂತ ಈಶ್ವರಯ್ಯ.
ಕಾಮಗಾರಿ ಸ್ಥಗಿತ: ಸೆ. 3, 2013ರಂದು ಕಾಲುವೆಗೆ ಪ್ರಾಯೋಗಿಕವಾಗಿ ನೀರು ಬಿಡಲಾಗಿತ್ತು. ರೈಜಿಂಗ್‌ಮೇನ್‌ನಲ್ಲಿ ಸೋರಿಕೆ ಇದೆ, ಇದನ್ನು ರಿಪೇರಿ ಮಾಡಿ ಶೀಘ್ರದಲ್ಲೇ ರೈತರಿಗೆ ನೀರು ಹರಿಸುತ್ತೇವೆ. ಜತೆಗೆ ರೈತರಿಗೆ ಪರಿಹಾರ ನೀಡುತ್ತೇವೆ ಎನ್ನುತ್ತಾರೆ ಯೋಜನೆಯ ಎಂಜಿನಿಯರ್ ನಾಗರಾಜ.
ಭೂಸ್ವಾಧೀನ ಪ್ರಕ್ರಿಯೆಯ ನಿಯಮಗಳನ್ನು ಗಾಳಿಗೆ ತೂರಿ, ರೈತರಿಗೆ ಪರಿಹಾರ ನೀಡಿಲ್ಲ. ಗುತ್ತಿಗೆದಾರರಿಂದಾಗಲಿ ಅಥವಾ ಇಲಾಖೆಯಿಂದಾಗಲಿ 3 ವರ್ಷಗಳ ಬೆಳೆ ಪರಿಹಾರವನ್ನು ರೈತರಿಗೆ ನೀಡಬೇಕು. ಇಲ್ಲದಿದ್ದರೆ ಯೋಜನೆಯನ್ನು ಸ್ಥಗಿತಗೊಳಿಸುತ್ತೇವೆ ಎನ್ನುತ್ತಾರೆ ಬೀರಬ್ಬಿ, ಅಂಗೂರು, ಕಾಂತೆಬೆನ್ನೂರು ಗ್ರಾಮಗಳ ರೈತರಾದ ಹನುಮಂತಪ್ಪ, ಬಸವರಾಜ, ಹನುಮೇಶ, ನಿಂಗಪ್ಪ.