ದೇಶದ ಸ್ಥಿತಿ ತೀರಾ ಅಧೋಗತಿಗೆ: ದೇವೇಗೌಡ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಸೆ. 30
ನನ್ನ ರಾಜಕೀಯ ಅನುಭವದ ಪ್ರಕಾರ ಈ ಹಿಂದಿಗಿಂತಲೂ ದೇಶದ ಇಂದಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅಭಿಪ್ರಾಯಪಟ್ಟರು.
ಜೆಡಿಎಸ್ ಜಿಲ್ಲಾ ಘಟಕದಿಂದ ನಗರದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿಗಿಂತಲೂ ದೇಶದ ಇಂದಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಮಹಿಳೆಯರಿಗೆ, ಮಕ್ಕಳಿಗೆ ಸೂಕ್ತ ರಕ್ಷಣೆ, ಭದ್ರತೆ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಜವಾಬ್ದಾರಿಯಿಲ್ಲ. ಅಧಿಕಾರದಲ್ಲಿರುವ ಕಾಂಗ್ರೆಸ್, ಅಧಿಕಾರ ಮುಗಿಸಿರುವ ಬಿಜೆಪಿ ತಿಕ್ಕಾಟಗಳು, ನಾಟಕಗಳನ್ನು ನೋಡಿದರೆ ಅಸಹ್ಯ ಹುಟ್ಟಿಸುತ್ತಿವೆ ಎಂದರು.
ದೇಶಕ್ಕಿಂತ ಪಕ್ಷ ದೊಡ್ಡದಲ್ಲ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ಹೀಗಾಗಿ ಕಾರ್ಯಕರ್ತರು ನಿಷ್ಠಾವಂತರಾಗಿ ತಮ್ಮ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಪಕ್ಷದ ಸಂಘಟನೆ ಸಾಧ್ಯ ಎಂದ ಅವರು, ಪಕ್ಷದ ಸಂಘಟನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಅನಂತರ ಪಕ್ಷದ ವ್ಯವಸ್ಥೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಮಾತನಾಡಿ, ಎಲ್ಲ ಸರಿಯಿರುವ ರಾಜಕೀಯ ಪಕ್ಷ, ನಾಯಕರು, ವ್ಯಕ್ತಿಗಳು ಜಗತ್ತಿನಲ್ಲೇ ಇಲ್ಲ. ಪುರಾಣಗಳಲ್ಲಿ ಕೇಳಿದಂತೆ ರಾಜ, ಮಹಾರಾಜರು ಅನುಭವಿಸುತ್ತಿದ್ದ ವಾಸ, ವನವಾಸ ಮತ್ತು ಅಜ್ಞಾತವಾಸಗಳನ್ನು ಇಂದಿನ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳು ಅನುಭವಿಸುತ್ತಿದ್ದಾರೆ. ಇಂದು ಜೆಡಿಎಸ್ ಬಿಟ್ಟು ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡ ಹಲವು ಶಾಸಕರು, ಮುಖಂಡರು ದೇವೇಗೌಡರ ಆಶೀರ್ವಾದದಿಂದ ಬೆಳೆದವರು. ಆದರೆ, ಇಂದು ಅವಹೇಳನ ಮಾಡುತ್ತಿದ್ದು, ಅವುಗಳಿಗೆ ಕಿವಿಗೊಡದೆ, ಪಕ್ಷವನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ನಿದ್ದೆ
ಲೋಕಸಭೆ ಚುನಾವಣೆ ಯಾವುದೇ ಸಂದರ್ಭದಲ್ಲಿ ಬಂದರೂ, ಎದುರಿಸಲು ಜೆಡಿಎಸ್ ಪಕ್ಷದ ಸಿದ್ಧವಾಗಿದ್ದು, ಈಗಾಗಲೇ ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಪ್ರಸ್ತುತ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಚಿಕ್ಕ ಮಕ್ಕಳಿಗಿಂತ ಹೆಚ್ಚು ನಿದ್ದೆ ಮಾಡುತ್ತಿದೆ. ಕೇವಲ 6-7 ಗಂಟೆಗಳು ಮಾಡಬೇಕಾದ ನಿದ್ದೆಯನ್ನು 22 ಗಂಟೆಗಳಿಗೆ ವಿಸ್ತರಿಸಿಕೊಂಡಿದೆ. ಕೇಂದ್ರ ಸರ್ಕಾರ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದರೆ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ನಿದ್ರೆಗೆ ಜಾರಿಕೊಂಡಿದೆ ಎಂದು ವ್ಯಂಗ್ಯವಾಡಿದರು.
ಸಭೆಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪುರ್, ಶಾಸಕ ಭೀಮಾನಾಯ್ಕ್, ಹಾಜೀಂ ಸಾಬ್ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಮುಂಡ್ರಿಗಿ ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಮುನ್ನಾಭಾಯಿ, ಭಾಸ್ಕರ್ ರೆಡ್ಡಿ, ಎಂ.ಎಸ್. ಗುರುಲಿಂಗನಗೌಡ, ಶಿವಪ್ಪ, ಎಚ್. ವೆಂಕಟೇಶ್, ಗೋವಿಂದರಾಜುಲು, ಎಚ್. ಕೊಟ್ರೇಶ್, ಅಡಿವೆಪ್ಪ, ನಾಗರತ್ನ, ಜ್ಯೋತಿ, ಫೋಟೋ ರಾಜ, ಎಚ್.ಎಂ. ಕಿರಣ್ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನರು ಭಾಗವಹಿಸಿದ್ದರು.