ಕಸ ವಿಲೇವಾರಿಗೆ ಆರ್ಎಫ್ಐಡಿ ಕಾರ್ಡ್
ಬಳ್ಳಾರಿ: ಸ್ಟೀಲ್ ಸಿಟಿ ಬಳ್ಳಾರಿಯಲ್ಲಿ ಕಸ ಪರಿಣಾಮಕಾರಿಯಾಗಿ ಸಂಗ್ರಹಿಸಿ, ಸ್ವಚ್ಛ ಬಳ್ಳಾರಿ ಪರಿಕಲ್ಪನೆ ಮತ್ತಷ್ಟು ಸಾಕಾರಗೊಳಿಸಲು ಬಳ್ಳಾರಿ ಮಹಾನಗರದಲ್ಲಿ ಪಾಲಿಕೆಯು ಇದೀಗ ಆರ್ಎಫ್ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡಿ ಕಾರ್ಡ್) ಬೇಸ್ಡ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲು ಕಾರ್ಯೋನ್ಮುಖವಾಗಿದೆ. ಈಗಾಗಲೇ ಅಳವಡಿಸುವ ಕಾರ್ಯ ನಡೆದಿದೆ. ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಬಳ್ಳಾರಿ ನಗರದಲ್ಲಿ ಅಳವಡಿಸಲಾಗುತ್ತಿದೆ.
ಸಾರ್ವಜನಿಕರು ಇನ್ಮುಂದೆ ಕಸ ಸಂಗ್ರಹಿಸಲು ಮಹಾನಗರ ಪಾಲಿಕೆ ಕಸ ಸಂಗ್ರಹಿಸುವ ವಾಹನ ತಮ್ಮ ಬಡಾವಣೆಯ ಕಡೆಗೆ ಬರುತ್ತಿಲ್ಲ ಎಂಬ ದೂರು ಕೊಡುವ ಅಗತ್ಯವಿಲ್ಲ. ಪ್ರತಿದಿನವು ಮಹಾನಗರ ಪಾಲಿಕೆಯಲ್ಲಿ ಯಾವ ವಾಹನ, ನಿರ್ದಿಷ್ಟ ಬಡಾವಣೆಗೆ ಹೋಗಿಲ್ಲ ಎಂಬುದು ಆರ್ಎಫ್ಐಡಿ ಬೇಸ್ಡ್ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಅಡಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಂಡು ಹಿಡಿಯಲು ಸಹಕಾರಿಯಾಗುತ್ತದೆ. ಅಲ್ಲದೆ ವಾಹನವು ಎಷ್ಟು ದೂರ ಕ್ರಮಿಸಿದೆ, ಡೀಸೆಲ್ ಎಷ್ಟು ಖಾಲಿಯಾಗಿದೆ ಎಂಬ ವಿಷಯವನ್ನು ಇಂಥ ವ್ಯವಸ್ಥೆಯಲ್ಲಿ ಕಂಡು ಹಿಡಿಯಬಹುದಾಗಿದೆ.
ಏನಿದು ಹೊಸ ವ್ಯವಸ್ಥೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ವಾಹನಗಳು ಇದ್ದರೂ, ನಿರ್ದಿಷ್ಟ, ನಿಗದಿತ ಪ್ರದೇಶಕ್ಕೆ ಹೋಗಿ ಕಸ ಸಂಗ್ರಹಿಸಿದ್ದಾರೋ ಇಲ್ಲವೋ ಎಂಬುದು ಗೊತ್ತಾಗುತ್ತಿರಲಿಲ್ಲ. ಸಾರ್ವಜನಿಕರು ದೂರು ಕೊಟ್ಟಾಗ ಮಾತ್ರ ಗೊತ್ತಾಗುತ್ತಿತ್ತು. ಈ ಕಾರಣಕ್ಕಾಗಿಯೇ ಪಾಲಿಕೆ, ಜಿಲ್ಲಾಧಿಕಾರಿಗಳು ಹೊಸ ವಿಧಾನಕ್ಕೆ ಮುಂದಾಗಿದ್ದಾರೆ. ಆರ್ಎಫ್ಐಡಿ ಬೇಸ್ಡ್ ಸಾಲಿಡ್ ವೆಸ್ಟ್ ಮ್ಯಾನೇಜ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಅಡಿಯಲ್ಲಿ ಸಾರ್ವಜನಿಕರ ಮನೆಯ ಹತ್ತಿರ ಆರ್ಎಫ್ಐಡಿ ಕಾರ್ಡ್ ಅಳವಡಿಸುತ್ತಾರೆ. ಇನ್ನು ಕಸ ಸಂಗ್ರಹಿಸುವ ವಾಹನದಲ್ಲಿ ಚಾಲಕನ ಬಳಿ ಹ್ಯಾಂಡ್ ಹೆಲ್ಡ್ ಟ್ರ್ಯಾಕಿಂಗ್ ಸಿಸ್ಟಮ್ ಮಷಿನ್ ಇರುತ್ತದೆ. ಮಷಿನ್ನ್ನು ಗ್ರಾಹಕರ ಮನೆಗಳ ಸಮೀಪ ಅಳವಡಿಸಿರುವ ಆರ್ಎಫ್ಐಡಿ ಕಾರ್ಡ್ಗೆ ತಾಕಿಸಿದರೆ, ಇಲ್ಲಿಗೆ ಬಂದು ಹೋಗಿದ್ದಾನೆ ಎಂಬ ಮಾಹಿತಿಯು ಮಷಿನ್ನಲ್ಲಿ ದಾಖಲಾಗುತ್ತದೆ. ಹ್ಯಾಂಡ್ ಹೆಲ್ಡ್ ಟ್ರ್ಯಾಕಿಂಗ್ ಸಿಸ್ಟಮ್ ಮಷಿನ್ನ್ನು ಪಾಲಿಕೆಗೆ ಹೋಗಿ, ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಸಾಫ್ಟ್ವೇರ್ನಲ್ಲಿ ನೋಡಿದಾಗ, ಕಸ ಸಂಗ್ರಹಿಸಲು ಎಲ್ಲಿಗೆ ಹೋಗಿದ್ದಾನೆ. ಎಲ್ಲಿಗೆ ಹೋಗಿಲ್ಲ ಎಂಬ ಮಾಹಿತಿ ಸಿಗುತ್ತದೆ.
1000 ಕಡೆ ಅಳವಡಿಸಲು ಚಿಂತನೆ: ಬಳ್ಳಾರಿ ಮಹಾನಗರ ಬೆಳೆದಂತೆ ಸ್ವಚ್ಛತೆಯ ಕಡೆ ಆದ್ಯತೆ ನೀಡಬೇಕಾಗಿದೆ. ಇಂತಹ ಸ್ವಚ್ಛತೆ ಕಾಯ್ದುಕೊಳ್ಳಬೇಕಾಗಿರುವುದರಿಂದ ಮಹಾನಗರ ಪಾಲಿಕೆಯು ಆರ್ಎಫ್ಐಡಿ ಬೇಸ್ಡ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲು ಮುಂದಾಗಿದೆ. ನಗರದ ಎಲ್ಲ ಕಡೆಗಳಲ್ಲಿ ಪ್ರತಿಯೊಂದು ಮನೆಗಳಿಗೆ ಆರ್ಎಫ್ಐಡಿ ಕಾರ್ಡ್ ಅಳವಡಿಸುವುದಿಲ್ಲ. ಒಂದು ಬೀದಿ ಆರಂಭ, ಆ ಬಡಾವಣೆಯ ಕೊನೆ ಮನೆಗೆ ಮಿಷನ್ ಅಳವಡಿಸುತ್ತಾರೆ. ಇದರಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ 1000 ಕಡೆಗಳಲ್ಲಿ ಆರ್ಎಫ್ಐಡಿ ಕಾರ್ಡ್ (ಕಾರ್ಡ್ ಬೆಲೆ ರು. 70) ಅಳವಡಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ 50ರಿಂದ 60 ಕಡೆ ಅಳವಡಿಸಲಾಗಿದೆ. ಮಹಾನಗರ ಪಾಲಿಕೆಯವರು 50ಕ್ಕೂ ಹೆಚ್ಚು ಹ್ಯಾಂಡ್ ಹೆಲ್ಡ್ ಟ್ರ್ಯಾಕಿಂಗ್ ಮಷಿನ್ ಖರೀದಿಸಿದ್ದಾರೆ (ಪ್ರತಿ ಮಷಿನ್ ಬೆಲೆ ಅಂದಾಜು ರು. 14 ಸಾವಿರ ಬೆಲೆ). ಆರ್ಎಫ್ಐಡಿ ಮಷಿನ್ನಲ್ಲಿ ಲೋಕೇಷನ್ ಟ್ಯಾಗ್ ಮಾಡಲಾಗಿರುತ್ತದೆ.
ಆರ್ಎಫ್ಐಡಿ(ರೇಡಿಯೋ ಫ್ರೀಕ್ವೆನ್ಸಿ ಐಡಿ ಕಾರ್ಡ್) ಬೇಸ್ಡ್ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಈಗಾಗಲೇ ಆರ್ಎಫ್ಐಡಿ ಕಾರ್ಡ್ಗಳನ್ನು ನಗರದ ಕೆಲವು ಕಡೆಗಳಲ್ಲಿ ಅಳವಡಿಸಲಾಗಿದೆ. ಚುನಾವಣೆ ಇರುವುದರಿಂದ ಪೂರ್ಣಗೊಳಿಸಲು ಆಗಿಲ್ಲ. ರು. 11 ಲಕ್ಷ ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಕಸವನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು, ನಗರದ ಸ್ವಚ್ಛತೆ ಕಾಯ್ದುಕೊಳ್ಳಲು ಇಂತಹ ವ್ಯವಸ್ಥೆ ಸಹಕಾರಿಯಾಗಿದೆ. ಇಂಥ ವ್ಯವಸ್ಥೆಯಲ್ಲಿ ಕಸವನ್ನು ಸಂಗ್ರಹಿಸಿದ ಮಾಹಿತಿಯನ್ನು ಅಧಿಕಾರಿಗಳು ಕುಳಿತಲ್ಲಿಯೇ ಪ್ರತಿನಿತ್ಯ ವೀಕ್ಷಿಸಬಹುದಾಗಿದೆ.
- ಚಿಕ್ಕಣ್ಣ, ಮಹಾನಗರ ಪಾಲಿಕೆ ಆಯುಕ್ತ, ಬಳ್ಳಾರಿ
-ಶಶಿಧರ ಮೇಟಿ